ಬೆಂಗಳೂರು: ಹಿರಿಯ ಕಲಾವಿದೆ, ‘ಅಭಿನಯ ಸರಸ್ವತಿ’ ಎಂದೇ ಖ್ಯಾತರಾಗಿದ್ದ ಪದ್ಮಭೂಷಣ ಬಿ. ಸರೋಜಾದೇವಿ ಅವರು ಇಂದು ವಿಧಿವಶರಾಗಿದ್ದಾರೆ ಎಂಬ ಸುದ್ದಿ ಭಾರತೀಯ ಚಿತ್ರರಂಗವನ್ನು ದಿಗ್ಭ್ರಮೆಗೊಳಿಸಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ 200ಕ್ಕೂ ಅಧಿಕ ಚಲನಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಮನೆಮಾತಾದ ಸರೋಜಾದೇವಿ ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ.
‘ಕಿತ್ತೂರು ಚೆನ್ನಮ್ಮ’, ‘ಭಕ್ತ ಕನಕದಾಸ’, ‘ಕಸ್ತೂರಿ ನಿವಾಸ’ ಮೊದಲಾದ ಸ್ಮರಣೀಯ ಚಿತ್ರಗಳ ಮೂಲಕ ತಮ್ಮ ಅಸಾಧಾರಣ ಕಲಾವಂತಿಕೆಯನ್ನು ಪ್ರದರ್ಶಿಸಿದ ಸರೋಜಾದೇವಿ ಅವರು, ಭಾರತೀಯ ಚಿತ್ರರಂಗದ ಒಂದು ಶಕ್ತಿಯಾಗಿದ್ದರು. ಅವರ ಅಭಿನಯದ ಶೈಲಿ, ಆಕರ್ಷಕ ವ್ಯಕ್ತಿತ್ವ ಮತ್ತು ಸರಳತೆಯು ಅವರನ್ನು ಎಲ್ಲರಿಗೂ ಪ್ರಿಯವಾಗಿಸಿತ್ತು.
ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ರಾಜಕಾರಣಿ ಬಿ.ಎಸ್. ಯಡಿಯೂರಪ್ಪ ಅವರು, ಸರೋಜಾದೇವಿ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. “ಅವರ ನಿಧನದಿಂದ ಭಾರತೀಯ ಚಿತ್ರರಂಗ ತನ್ನ ಮಾತೃಸ್ವರೂಪಿ ಕಲಾವಿದೆಯನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ದೇವರು ಅವರ ಕುಟುಂಬದವರಿಗೆ ಮತ್ತು ಅಪಾರ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸರೋಜಾದೇವಿ ಅವರ ಕೊಡುಗೆಯು ಚಿತ್ರರಂಗದಲ್ಲಿ ಶಾಶ್ವತವಾಗಿ ಉಳಿಯಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಓಂ ಶಾಂತಿ 🙏🏼