ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಾಗಿದ್ದ ₹39,000 ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವ ರಾಜ್ಯ ಸರ್ಕಾರದ ಕ್ರಮ ವಿವಾದಕ್ಕೆ ಕಾರಣವಾಗಿದೆ. ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಆದರೆ, ಈ ಯೋಜನೆಗಳ ಅನುಷ್ಠಾನಕ್ಕಾಗಿ Scheduled Caste Sub Plan (SCSP) ಮತ್ತು Tribal Sub Plan (TSP) ಅನುದಾನ ಬಳಸಲಾಗುವುದೆಂದು ಕಾಂಗ್ರೆಸ್ ನಾಯಕರು ಹೇಳಿರಲಿಲ್ಲ. ಆದರೆ ಅಧಿಕಾರಕ್ಕೆ ಬಂದ ಬಳಿಕ ₹39,000 ಕೋಟಿ ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕೆ ಮೀಸಲಾಗಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿಂಗಡಿಸಲಾಗಿದೆ.
ಸಮಾಜ ಕಲ್ಯಾಣ ಯೋಜನೆಗಳಿಗೆ ಹಣ ಕೊರತೆ?
SCSP/TSP ಯೋಜನೆಗಳ ಉದ್ದೇಶ ಪರಿಶಿಷ್ಟ ಸಮುದಾಯದ ಜನರಿಗೆ ಶಿಕ್ಷಣ, ಉದ್ಯೋಗ, ಸ್ವಾವಲಂಬನೆ, ಭೂ ಒಡೆತನ, ಮೂಲ ಸೌಕರ್ಯ ಅಭಿವೃದ್ಧಿ, ಸ್ವಂತ ಉದ್ಯೋಗ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವಸತಿಶಾಲೆ ನಿರ್ಮಾಣ ಮಾಡುವುದು. ಆದರೆ ಈ ನಿಧಿಯನ್ನು ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ವಿದ್ಯಾನಿಧಿ, ಅನ್ನಭಾಗ್ಯ ಯೋಜನೆಗಳಿಗೆ ಬಳಸಿರುವುದು ಪ್ರಶ್ನೆಯಾಗಿದೆ.
ಈ ನಿರ್ಧಾರವನ್ನು ವಿರೋಧಿಸಿದ ಕೆಲ ಸಚಿವರು ಸಚಿವ ಸಂಪುಟ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಕೂಡಾ ಮೊದಲಿಗೆ ಹಿಂಜರಿದಿದ್ದರು. ಆದರೆ, ಆಧುನಿಕ ಕಲ್ಯಾಣ ಯೋಜನೆಗಳ ನೆಪದಲ್ಲಿ ಪರಿಶಿಷ್ಟ ಸಮುದಾಯದ ಅನುದಾನವೇ ಕಡಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಿಗಮಗಳಿಗೆ ಕೇವಲ ₹332 ಕೋಟಿ ಮೀಸಲು
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಲಿಡ್ಕರ್, ಸಫಾಯಿ ಕರ್ಮಚಾರಿ ನಿಗಮ, ಅಲೆಮಾರಿ-ಅರೆಅಲೆಮಾರಿ ನಿಗಮಗಳಿಗೆ ಸರ್ಕಾರ ಮೀಸಲಾಗಿಟ್ಟಿದ್ದು ಕೇವಲ ₹332 ಕೋಟಿ ಮಾತ್ರ. ಅದರಲ್ಲೂ ಬಿಡುಗಡೆ ಮಾಡಿರುವುದು ಕೇವಲ ₹88 ಕೋಟಿ!
ಈ ನಿಗಮಗಳಿಗೆ ಸರಕಾರದ ಬೆಂಬಲವಿಲ್ಲದ ಕಾರಣ ಯಾವುದೇ ಯೋಜನೆ ಜಾರಿಗೆ ಬರದೆ, ವೇತನ ಮತ್ತು ಸಂಚಾಲನೆಗೆ ಹಣ ಕೊರತೆಯಾಗಿದೆ ಎಂದು ವರದಿಗಳು ಹೇಳುತ್ತವೆ.
ಸಮಾಜದಲ್ಲಿ ಆಕ್ರೋಶ
ಪರಿಶಿಷ್ಟ ಸಮುದಾಯಗಳಿಗೆ ಮೀಸಲಾಗಿದ್ದ ಅನುದಾನವನ್ನು ಸರ್ಕಾರ ಹಿಂತೆಗೆದುಕೊಂಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ದಲಿತ ಸಂಘಟನೆಗಳು ಹಾಗೂ ಸಮಾಜ ಸೇವಕರು “ಗ್ಯಾರಂಟಿ ಯೋಜನೆಗಳ ವೆಚ್ಚ ಸರ್ಕಾರದ ಸಾಮಾನ್ಯ ನಿಧಿಯಿಂದಲೇ ಬರಬೇಕು, ಪರಿಶಿಷ್ಟರ ಮೀಸಲು ನಿಧಿಗೆ ಕೈ ಹಾಕಬಾರದು” ಎಂದು ಆಗ್ರಹಿಸುತ್ತಿದ್ದಾರೆ.
ನಿಯಮ ಉಲ್ಲಂಘನೆಯ ಆಕ್ಷೇಪ
SCSP/TSP ಕಾಯ್ದೆಯ ಸೆಕ್ಷನ್ 7(ಡಿ) ರದ್ದು ಮಾಡಿರುವ ಸರ್ಕಾರ, 7(ಸಿ) ಸೆಕ್ಷನ್ ಬಳಸಿಕೊಂಡು ವಿಶೇಷ ಸಂದರ್ಭದಲ್ಲಿ ಈ ಅನುದಾನ ಬಳಸಬಹುದು ಎಂದು ಸಮರ್ಥಿಸಿಕೊಂಡಿದೆ. ಈ ನಿಯಮ ರದ್ದು ಮಾಡಿ, ಪರಿಶಿಷ್ಟ ಸಮುದಾಯಗಳಿಗೆ ಮೀಸಲಾಗಿದ್ದ ಹಣ ಅವರ ಕಲ್ಯಾಣಕ್ಕೂ, ಶಾಶ್ವತ ಅಭಿವೃದ್ದಿಗೂ ಮಾತ್ರ ಬಳಸುವಂತೆ ನಿಯಮಗಳನ್ನು ಸ್ಪಷ್ಟಗೊಳಿಸಬೇಕೆಂಬ ಒತ್ತಾಯ ತೀವ್ರವಾಗಿದೆ.
ಸಮಾಜ ಕಲ್ಯಾಣಕ್ಕೆ ಸವಾಲು
ಪರಿಶಿಷ್ಟ ಸಮುದಾಯಗಳ ಜನರಿಗೆ ಕೌಶಲ್ಯಾಭಿವೃದ್ಧಿ, ಉದ್ಯೋಗ, ಭೂಮಿಯ ಮಾಲಕತ್ವ, ಮಹಿಳಾ ಅಭಿವೃದ್ಧಿ, ಸ್ವಾವಲಂಬನೆಗಾಗಿ ಮೀಸಲಾಗಿದ್ದ ಹಣ ತಾತ್ಕಾಲಿಕ ಕಲ್ಯಾಣ ಯೋಜನೆಗಳಿಗೆ ಬಳಸಿದರೆ ಪರಿಶಿಷ್ಟ ವರ್ಗಗಳ ದೀರ್ಘಕಾಲಿಕ ಅಭಿವೃದ್ಧಿಗೆ ತೊಂದರೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ನಿಗಮಗಳ ದುಸ್ಥಿತಿ – ಸರ್ಕಾರದ ಭರವಸೆ?
ಈ ಅನುದಾನದಿಂದ ಪರಿಶಿಷ್ಟ ಸಮುದಾಯಗಳಿಗೆ ತಾತ್ಕಾಲಿಕ ಸಹಾಯವಾಗಬಹುದು. ಆದರೆ ನಿಗಮಗಳ ನೆರವಿಲ್ಲದೆ ದೀರ್ಘಕಾಲಿಕ ಅಭಿವೃದ್ಧಿ ಸಾಧ್ಯವಿಲ್ಲ. ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಗೆದುಕೊಂಡು, ಪರಿಶಿಷ್ಟ ಸಮುದಾಯದ ಹಕ್ಕುಗಳನ್ನು ಕಾಪಾಡಬೇಕು ಎಂಬುದು ಒತ್ತಾಯವಾಗಿದೆ.