ಬೆಂಗಳೂರು: ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಬೆಂಗಳೂರಿನ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಅವರ ಮನೆಗೆ ಭೇಟಿ ನೀಡಿ, ಅವರ ಪಾರ್ಥೀವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದರು.
ರಾಜ್ಯಪಾಲರು ಭರತ್ ಭೂಷಣ್ ಅವರ ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಈ ದುರ್ಘಟನೆಯ ಬಗ್ಗೆ ಗಾಢ ದುಃಖ ವ್ಯಕ್ತಪಡಿಸಿದರು. ಅವರು ಕುಟುಂಬಕ್ಕೆ ಧೈರ್ಯ ತುಂಬಿ, ರಾಜ್ಯ ಸರ್ಕಾರದ ಬೆಂಬಲವನ್ನು ಭರವಸೆ ನೀಡಿದರು. ಭೇಟಿಯ ಸಂದರ್ಭದಲ್ಲಿ, ರಾಜ್ಯಪಾಲರು ಭರತ್ ಅವರ ಸಂಬಂಧಿಯೊಬ್ಬರೊಂದಿಗೆ ಮಾತನಾಡಿ, ಘಟನೆಯ ಕುರಿತು ಹೆಚ್ಚಿನ ಮಾಹಿತಿ ಪಡೆದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಗೆಹ್ಲೋಟ್ ಅವರು, “ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಅತ್ಯಂತ ಖಂಡನೀಯವಾದುದು. ಪ್ರವಾಸಿ ತಾಣಗಳಲ್ಲಿ ಸುರಕ್ಷತೆಯನ್ನು ಇನ್ನಷ್ಟು ಬಿಗಿಗೊಳಿಸಬೇಕಾಗಿದೆ. ಈ ಘಟನೆಯಲ್ಲಿ ಎಲ್ಲಿ ಲೋಪವಾಗಿದೆ ಎಂಬುದನ್ನು ಅಧ್ಯಯನ ಮಾಡಿ, ಮುಂದೆ ಇಂತಹ ದುರಂತಗಳು ಸಂಭವಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು,” ಎಂದು ಹೇಳಿದರು.
ಅವರು ಮುಂದುವರೆದು, “ಭಾರತ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಉಗ್ರರು ಮತ್ತು ಪಾಕಿಸ್ತಾನವು ಮುಂದೆ ಇಂತಹ ಕೃತ್ಯಗಳಿಗೆ ಕೈಹಾಕದಂತೆ ದೇಶವು ಸೂಕ್ತ ಪಾಠ ಕಲಿಸಲಿದೆ ಎಂಬ ವಿಶ್ವಾಸವಿದೆ. ಕ್ಯಾಬಿನೆಟ್ ಕಮಿಟಿ ಸಭೆಯಲ್ಲಿ ತೆಗೆದುಕೊಂಡಿರುವ ಕಠಿಣ ನಿರ್ಧಾರಗಳು ಪಾಕಿಸ್ತಾನಕ್ಕೆ ಸಂಕಷ್ಟ ಉಂಟುಮಾಡಲಿವೆ,” ಎಂದು ತಿಳಿಸಿದರು.
ರಾಜ್ಯಪಾಲರು ಕರ್ನಾಟಕ ರಾಜ್ಯ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದರು. “ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಪ್ರವಾಸಿಗರನ್ನು ರಕ್ಷಿಸಿ, ಸುರಕ್ಷಿತವಾಗಿ ವಾಪಸ್ ಕರೆತರುವಲ್ಲಿ ರಾಜ್ಯ ಸರ್ಕಾರ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ,” ಎಂದು ಅವರು ಹೇಳಿದರು.
ಇಂದು ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಈ ದಾಳಿಯ ದುಷ್ಕೃತ್ಯಕಾರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುವ ಸಾಧ್ಯತೆ ಇದೆ ಎಂದು ರಾಜ್ಯಪಾಲರು ಸೂಚಿಸಿದರು.