ನವದೆಹಲಿ: ಆರ್ಥಿಕ ಸೇವೆಗಳ ಇಲಾಖೆ (ಡಿಎಫ್‌ಎಸ್), ಹಣಕಾಸು ಸಚಿವಾಲಯವು ಬ್ಯಾಂಕುಗಳಿಗೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (ಪಿಎಂಜೆಡಿವೈ)ಯ ನಿಷ್ಕ್ರಿಯ ಖಾತೆಗಳನ್ನು ಮುಚ್ಚಲು ಸೂಚಿಸಿದೆ ಎಂಬ ಮಾಧ್ಯಮ ವರದಿಗಳನ್ನು ಇಲಾಖೆ ಸ್ಪಷ್ಟವಾಗಿ ತಳ್ಳಿಹಾಕಿದೆ.
ಜುಲೈ 1 ರಿಂದ ಆರಂಭವಾದ ಮೂರು ತಿಂಗಳ ಅಭಿಯಾನದ ಮೂಲಕ ದೇಶಾದ್ಯಂತ ಪಿಎಂ ಜನ್ ಧನ್ ಯೋಜನೆ ಖಾತೆಗಳು, ಜೀವನ್ ಜ್ಯೋತಿ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಮತ್ತು ಇತರ ಕಲ್ಯಾಣ ಯೋಜನೆಗಳನ್ನು ಜನರಿಗೆ ಇನ್ನಷ್ಟು ಸಮರ್ಪಕವಾಗಿ ತಲುಪಿಸುವ ಗುರಿಯನ್ನು ಡಿಎಫ್‌ಎಸ್ ಹೊಂದಿದೆ. ಈ ಅಭಿಯಾನದ ವೇಳೆ ಬ್ಯಾಂಕುಗಳು ಎಲ್ಲಾ ಬಾಕಿ ಖಾತೆಗಳಿಗೆ ಪುನಃ-ಕೆವೈಸಿ (ಗ್ರಾಹಕ ಗುರುತಿನ ಪರಿಶೀಲನೆ) ಪ್ರಕ್ರಿಯೆಯನ್ನೂ ನಡೆಸಲಿವೆ.
ಡಿಎಫ್‌ಎಸ್ ನಿಷ್ಕ್ರಿಯ ಪಿಎಂಜೆಡಿವೈ ಖಾತೆಗಳ ಸಂಖ್ಯೆಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ಖಾತೆದಾರರನ್ನು ಸಂಪರ್ಕಿಸಿ ಖಾತೆಗಳನ್ನು ಕಾರ್ಯಾನ್ವಿತಗೊಳಿಸಲು ಬ್ಯಾಂಕುಗಳಿಗೆ ಸಲಹೆ ನೀಡಿದೆ. ಪಿಎಂಜೆಡಿವೈ ಖಾತೆಗಳ ಒಟ್ಟು ಸಂಖ್ಯೆಯಲ್ಲಿ ನಿರಂತರ ಏರಿಕೆ ಕಂಡಗಾಗಿದೆ ಎಂದು ಇಲಾಖೆ ತಿಳಿಸಿದೆ. ನಿಷ್ಕ್ರಿಯ ಖಾತೆಗಳನ್ನು ಸಾಮೂಹಿಕವಾಗಿ ಮುಚ್ಚಿರುವ ಯಾವುದೇ ಘಟನೆಗಳು ಇಲಾಖೆಯ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.