ಬೆಂಗಳೂರು: ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ದಾಖಲಾತಿ ಪರಿಶೀಲನೆ ಮುಗಿದರೂ ಏಳು ತಿಂಗಳಾದರೂ ನೇಮಕಾತಿ ಆದೇಶ ಪತ್ರ ಸಿಗದ ಕಾರಣ ಪ್ರತಿಭಟನೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಜೆಡಿಎಸ್ ಪಕ್ಷ ಬೆಂಬಲ ವ್ಯಕ್ತಪಡಿಸಿದೆ. ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಅವರು ಗುರುವಾರ ಫ್ರೀಡಂ ಪಾರ್ಕ್‌ನಲ್ಲಿ ಧರಣಿನಿರತ ಅಭ್ಯರ್ಥಿಗಳನ್ನು ಭೇಟಿಯಾಗಿ, ಪಕ್ಷದ ಪರವಾಗಿ ಸಂಪೂರ್ಣ ಬೆಂಬಲ ಘೋಷಿಸಿದರು.
ರಾಜ್ಯ ಸರಕಾರವು 2021ರಲ್ಲಿ 402 ಪಿಎಸ್‌ಐ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಾಲ್ಕು ವರ್ಷಗಳ ನಂತರ 2024ರ ಡಿಸೆಂಬರ್ 26ರಂದು ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿತು. ದಾಖಲಾತಿ ಪರಿಶೀಲನೆಯೂ ಮುಗಿದಿದ್ದರೂ, ಏಳು ತಿಂಗಳು ಕಳೆದರೂ ನೇಮಕಾತಿ ಆದೇಶ ಪತ್ರಗಳನ್ನು ನೀಡದಿರುವುದು ಸರಿಯಲ್ಲ ಎಂದು ರಮೇಶ್ ಗೌಡ ಆಕ್ಷೇಪಿಸಿದರು. “ಸರಕಾರ ಕೂಡಲೇ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಬೇಕು,” ಎಂದು ಒತ್ತಾಯಿಸಿದರು.
“ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕಳೆದ ಮೂರು ತಿಂಗಳಿಂದ ‘ಇಗೋ ಕೊಟ್ಟೆವು, ಅಗೋ ಕೊಟ್ಟೆವು’ ಎಂದು ಹೇಳುತ್ತಿದ್ದಾರೆ. ಆದರೆ, ಅಭ್ಯರ್ಥಿಗಳಿಗೆ ಇನ್ನೂ ನೇಮಕಾತಿ ಪತ್ರ ಸಿಕ್ಕಿಲ್ಲ. ಹಗಲಿರುಳು ಕಷ್ಟಪಟ್ಟು ಓದಿ, ಪ್ರಾಮಾಣಿಕವಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಡ ಅಭ್ಯರ್ಥಿಗಳಿಗೆ ಸರಕಾರ ಅನ್ಯಾಯ ಮಾಡಬಾರದು,” ಎಂದು ರಮೇಶ್ ಗೌಡ ಆಗ್ರಹಿಸಿದರು.
ಅಭ್ಯರ್ಥಿಗಳ ಧರಣಿ, ಸರಕಾರದ ವಿಳಂಬ ಖಂಡನೆ
ಸರಕಾರದ ವಿಳಂಬ ಧೋರಣೆಯನ್ನು ಖಂಡಿಸಿ ಅಭ್ಯರ್ಥಿಗಳು ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ, ಸರಕಾರ ಕ್ರಮ ಕೈಗೊಂಡಿಲ್ಲ. “ಈಗಲಾದರೂ ಸರಕಾರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಿ, ಹುದ್ದೆಗಳಿಗೆ ನಿಯೋಜಿಸಬೇಕು,” ಎಂದು ರಮೇಶ್ ಗೌಡ ಒತ್ತಾಯಿಸಿದರು.
ಧರಣಿಯಲ್ಲಿ ಭಾಗವಹಿಸಿದ್ದ ಬಹುತೇಕ ಅಭ್ಯರ್ಥಿಗಳೊಂದಿಗೆ ರಮೇಶ್ ಗೌಡ ಮಾತುಕತೆ ನಡೆಸಿ, “ಜೆಡಿಎಸ್ ಪಕ್ಷ ನಿಮ್ಮ ಜತೆ ಇದ್ದು, ನಿಮ್ಮ ಹೋರಾಟಕ್ಕೆ ಬೆಂಬಲ ನೀಡಲಿದೆ,” ಎಂದು ಭರವಸೆ ನೀಡಿದರು.