ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಮಳಲೂರಿನ ಕಂಬಿಹಳ್ಳಿ ಗ್ರಾಮದ ನಿವಾಸಿಯಾಗಿರುವ ಡಿ.ಎಂ. ಧನಲಕ್ಷ್ಮೀಕುಮಾರಿ ಹಾಗೂ ಕೆ. ಹುಲಿಯಪ್ಪ ಗೌಡ ಅವರ ಪುತ್ರಿಯಾದ ಪುಟಾಣಿ ಮನಸ್ಮಿತಾ ಅವರಿಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬ್ರಿಗೇಡಿಯರ್ ಅರ್ಜುನ್ ಸೆಗನ್, ಎಸ್.ಎಂ ಅವರು ದಿ ರಿಯಲ್ ಹೀರೋ ಆಫ್ ನೇಷನ್ ಎಕ್ಸ್ ಸರ್ವಿಸ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸಾಧನೆಯ ಪ್ರಮಾಣಪತ್ರ ನೀಡಿ ಗೌರವಿಸಿದ್ದಾರೆ.
ಕೇವಲ 15 ತಿಂಗಳ ವಯಸ್ಸಿನಲ್ಲಿ 1115 ವಸ್ತುಗಳನ್ನು ಗುರುತಿಸಿದ ವಿಶ್ವದ ಮೊಟ್ಟಮೊದಲ ಮಗುವಾಗಿ ಮನಸ್ಮಿತಾ ದಾಖಲೆ ಸೃಷ್ಟಿಸಿದ್ದಾರೆ. ತಮ್ಮ ಅಸಾಧಾರಣ ನೆನಪಿನ ಶಕ್ತಿಯಿಂದ 60 ನಿಮಿಷಗಳಲ್ಲಿ ಸಾವಿರಕ್ಕೂ ಹೆಚ್ಚು ವಸ್ತುಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿರುವ ಈ ಬಾಲಕಿ, ಈಗಾಗಲೇ ಒಂದು ರಾಷ್ಟ್ರೀಯ ಪ್ರಶಸ್ತಿ, ನಾಲ್ಕು ರಾಜ್ಯ ಪ್ರಶಸ್ತಿಗಳು ಮತ್ತು ಎರಡು ಜಾಗತಿಕ ಮಟ್ಟದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ದಿ ರಿಯಲ್ ಹೀರೋ ಆಫ್ ನೇಷನ್ ಎಕ್ಸ್ ಸರ್ವಿಸ್ ವೆಲ್ಫೇರ್ ಅಸೋಸಿಯೇಷನ್ ದಾಖಲೆಗಳಲ್ಲಿ ಮನಸ್ಮಿತಾ ಅವರ ಅಪೂರ್ವ ಗ್ರಹಣ ಶಕ್ತಿ ಮತ್ತು ಸಾಧನೆಯನ್ನು ರಾಷ್ಟ್ರೀಯ ಹೆಮ್ಮೆಗೆ ಅರ್ಹವಾದ ಐತಿಹಾಸಿಕ ಸಾಧನೆಯಾಗಿ ನೋಂದಾಯಿಸಲಾಗಿದೆ. ಈ ಸಂದರ್ಭದಲ್ಲಿ ಬ್ರಿಗೇಡಿಯರ್ ಅರ್ಜುನ್ ಸೆಗನ್, ಎಸ್.ಎಂ ಅವರು ಮನಸ್ಮಿತಾ ಅವರಿಗೆ ಸಾಧನೆಯ ಪ್ರಮಾಣಪತ್ರವನ್ನು ಪ್ರದಾನ ಮಾಡಿ, “ವಯಸ್ಸು ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಮನಸ್ಮಿತಾ ಸಾಬೀತುಪಡಿಸಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಅಸೋಸಿಯೇಷನ್‌ನ ಅಧ್ಯಕ್ಷ ವೇಲು ಬಲರಾಮ್ ಮತ್ತು ಇತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ಮನಸ್ಮಿತಾ ಅವರ ಈ ಸಾಧನೆಯು ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆಯ ಕ್ಷಣವಾಗಿ ಗುರುತಿಸಲ್ಪಟ್ಟಿದೆ.