ಬೆಂಗಳೂರು: ಟೈಡಾಲ್ ಮಾತ್ರೆಗಳನ್ನು ಡ್ರಗ್ ಆಗಿ ಉಪಯೋಗಿಸುವ ಕರಾಳ ಸತ್ಯ ಬೆಳಕಿಗೆ ಬಂದಿದ್ದು, ಈ ದಂಧೆಗೆ ಸಾಥ್ ನೀಡಿದ ಆರೋಪದ ಮೇಲೆ ಚಾಮರಾಜಪೇಟೆ ಮತ್ತು ಜೆಜೆಆರ್ ನಗರ ಪೊಲೀಸ್ ಠಾಣೆಯ ಒಟ್ಟು 10 ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣದಲ್ಲಿ ಚಾಮರಾಜಪೇಟೆ ಠಾಣೆಯ ಇನ್ಸ್ಪೆಕ್ಟರ್ ಮಂಜಣ್ಣ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿಯ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ.
ಕಳೆದ ಆಗಸ್ಟ್ 29ರಂದು ಆರ್‌ಆರ್ ನಗರ ಠಾಣೆಯಲ್ಲಿ ಟೈಡಾಲ್ ಟ್ಯಾಬ್ಲೆಟ್ ದಂಧೆಗೆ ಸಂಬಂಧಿಸಿದಂತೆ ಸಲ್ಮಾನ್ @ಪಾಪ, ಸಲ್ಮಾನ್ @ಪುಟಾಟ್, ನಿಯಾಜ್, ನವಾಜ್, ರೇಷ್ಮಾ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಧಿತರಿಂದ 4 ಲಕ್ಷ ರೂ. ನಗದು ಮತ್ತು 4 ಲಕ್ಷ ರೂ. ಮೌಲ್ಯದ 1000 ಟೈಡಾಲ್ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ತನಿಖೆ ವೇಳೆ ಆರೋಪಿಗಳು, ಚಾಮರಾಜಪೇಟೆ ಮತ್ತು ಜೆಜೆಆರ್ ನಗರ ಠಾಣೆಯ ಕೆಲವು ಪೊಲೀಸರ ಜೊತೆಗಿನ ನಂಟನ್ನು ಬಯಲುಗೊಳಿಸಿದ್ದಾರೆ. ಡ್ರಗ್ ದಂಧೆಗೆ ಸಹಕಾರ ನೀಡಲು ಒಬ್ಬೊಬ್ಬ ಪೊಲೀಸರಿಗೆ ತಿಂಗಳಿಗೆ 1 ರಿಂದ 1.5 ಲಕ್ಷ ರೂ. ಲಂಚ ನೀಡುತ್ತಿದ್ದರೆಂದು ಆರೋಪಿಗಳು ತಿಳಿಸಿದ್ದಾರೆ.
ಈ ಆಘಾತಕಾರಿ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಿಭಾಗದ ಡಿಎಸ್‌ಪಿ ಗಿರೀಶ್, ಹೆಚ್ಚಿನ ತನಿಖೆಗೆ ಎಸಿಪಿ ಚಂದನ್‌ಗೆ ಜವಾಬ್ದಾರಿ ವಹಿಸಿದ್ದಾರೆ. ಎಸಿಪಿ ಚಂದನ್ ನಡೆಸಿದ ತನಿಖೆಯಲ್ಲಿ ಚಾಮರಾಜಪೇಟೆ ಠಾಣೆಯ ಇನ್ಸ್ಪೆಕ್ಟರ್ ಮಂಜಣ್ಣ, ಕಾನ್ಸ್ಟೇಬಲ್‌ಗಳಾದ ಶಂಕರ್, ಪ್ರಸನ್ನ, ಶಿವರಾಜ್, ಆನಂದ್, ರಮೇಶ್ ಬಾನೋಂದ್ ಮತ್ತು ಜೆಜೆಆರ್ ನಗರ ಠಾಣೆಯ ಕುಮಾರ್, ಆನಂದ, ಬಸವಣ್ಣ ಮತ್ತು ಮಹೇಶ್ ಎಂಬ ಸಿಬ್ಬಂದಿಯ ವಿರುದ್ಧ ಆರೋಪ ಕಂಡುಬಂದಿವೆ.
ತನಿಖೆ ವರದಿಯ ಆಧಾರದ ಮೇಲೆ ಡಿಎಸ್‌ಪಿ ಗಿರೀಶ್, ಈ 10 ಸಿಬ್ಬಂದಿಯನ್ನು ಅಮಾನತುಗೊಳಿಸಲು ಶಿಫಾರಸು ಮಾಡಿದ್ದು, ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಈ ಶಿಫಾರಸನ್ನು ಒಪ್ಪಿ ಅಮಾನತು ಆದೇಶ ಹೊರಡಿಸಿದ್ದಾರೆ.
ಈ ಘಟನೆಯಿಂದ ಪೊಲೀಸ್ ಇಲಾಖೆಯ ಒಳಗಿನ ಕೆಲವು ಕರಾಳ ಸತ್ಯಗಳು ಬಯಲಾಗಿದ್ದು, ಇದು ಇತರ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆಯಾಗಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ಮುಂದಿನ ಕ್ರಮಗಳ ಬಗ್ಗೆ ಗಮನವಿರಲಿದೆ.