ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. “ಪೊಲೀಸ್ ಆಯುಕ್ತರು ನನ್ನ ಬಳಿ ಬಂದು, ಆರ್‌ಸಿಬಿ ತಂಡದವರಿಗೆ ಕಾರ್ಯಕ್ರಮವನ್ನು 10 ನಿಮಿಷಗಳಲ್ಲಿ ಮುಗಿಸುವಂತೆ ಸೂಚನೆ ನೀಡಿ ಎಂದು ಮನವಿ ಮಾಡಿದ್ದರಿಂದ, ನಾನು ಕಾರ್ಯಕ್ರಮಕ್ಕೆ ತೆರಳಿ ಸೂಚನೆ ನೀಡಿದೆ,” ಎಂದು ಶಿವಕುಮಾರ್ ತಿಳಿಸಿದರು.
ವಿಧಾನಸಭೆಯಲ್ಲಿ ಆರ್‌ಸಿಬಿ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದ ಬಗ್ಗೆ ಚರ್ಚೆಯ ಸಂದರ್ಭದಲ್ಲಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, “ಸರ್ಕಾರ ಕಾರ್ಯಕ್ರಮಕ್ಕೆ ಅನುಮತಿ ನೀಡಿರದಿದ್ದರೆ, ಡಿಸಿಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಯಾಕೆ ತೆರಳಿದರು?” ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ನನ್ನನ್ನು ಪದೇಪದೇ ನೆನಪಿಸಿಕೊಳ್ಳದಿದ್ದರೆ ನಿಮಗೆ ಸಮಾಧಾನವಾಗದು. ನಿಮ್ಮ ಪಕ್ಷದವರಿಗೆ ಖುಷಿಪಡಿಸಲು ಆಗದು, ನಿಮಗೆ ಖುಷಿಯಾಗುವಂತೆ ಉತ್ತರ ಕೊಡಲೂ ಆಗದು,” ಎಂದು ಛೇಡಿಸಿದರು.
“ಅಂದು ವಿಧಾನಸೌಧದ ಎದುರು ನಡೆದ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೆಎಸ್‌ಸಿಎ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಕ್ರೀಡಾಂಗಣಕ್ಕೆ ತೆರಳಲಾಗದೇ ಹತಾಶರಾಗಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಕಾರ್ಯಕ್ರಮವನ್ನು 10 ನಿಮಿಷಗಳಲ್ಲಿ ಮುಗಿಸುವಂತೆ ವ್ಯವಸ್ಥೆ ಮಾಡಿ ಎಂದು ಪೊಲೀಸ್ ಆಯುಕ್ತರು ನನ್ನ ಬಳಿ ಮನವಿ ಮಾಡಿದರು. ಆ ಮನವಿಯಂತೆ ನಾನು ಕಾರ್ಯಕ್ರಮಕ್ಕೆ ತೆರಳಿದ್ದು ನಿಜ, ಅಲ್ಲಿ ಇದ್ದದ್ದು ನಿಜ, ಆರ್‌ಸಿಬಿ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದು ನಿಜ, 10 ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಸುವಂತೆ ಸೂಚನೆ ನೀಡಿದ್ದು ನಿಜ. ಇದೇ ವಿಷಯವನ್ನು ಕುನ್ಹಾ ತನಿಖಾ ತಂಡದ ಮುಂದೆ ಹೇಳಿಕೆಯಾಗಿ ನೀಡಿದ್ದೇನೆ. ನಾನು ಅಲ್ಲಿಗೆ ಹೋಗಿಲ್ಲ ಎಂದು ಹೇಳುತ್ತಿಲ್ಲ, ಆದರೆ ಅಲ್ಲಿಗೆ ಹೋಗಲು ನಿಮ್ಮ ಅನುಮತಿಯ ಅಗತ್ಯವಿಲ್ಲ. ಪೊಲೀಸರ ಮನವಿಯ ಮೇರೆಗೆ ನನ್ನ ಜವಾಬ್ದಾರಿಯಿಂದ ತೆರಳಿ ಸೂಚನೆ ನೀಡಿದ್ದೇನೆ. ಕಪ್‌ಗೆ ಮುತ್ತಿಟ್ಟಿದ್ದೇನೆ, ಆಟಗಾರರನ್ನು ಅಭಿನಂದಿಸಿದ್ದೇನೆ,” ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.