ನವದೆಹಲಿಯ ಜನವರಿ 10:
ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ನಿನ್ನೆ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ “ನೂತನ ವರ್ಷ 2025” ರ ಶುಭಾಶಯಗಳನ್ನು ಕೋರಿದರು.
ಬೇಟಿಯ ವೇಳೆ, ಶ್ರೀ ಶೆಟ್ಟರ್ ಅವರು ತಮ್ಮ ಮೊದಲ ಸಂಸತ್ ಚುನಾವಣೆಗಾಗಿ ಬೆಳಗಾವಿ ನಗರಕ್ಕೆ ಆಗಮಿಸಿ ಚುನಾವಣೆಯಲ್ಲಿ ನೀಡಿದ ಸಹಕಾರವನ್ನು ಪ್ರಧಾನಮಂತ್ರಿಯವರೊಂದಿಗೆ ಸ್ಮರಿಸಿದರು. ಬೇಟಿಯ ಸಮಯದಲ್ಲಿ ಪ್ರಧಾನಿ ಮೋದಿಜಿ ಸೌಹಾರ್ದದಿಂದ ಸಂಸದರ ಕುಶಲೋಪರಿ ವಿಚಾರಿಸಿ, ಕುಟುಂಬದ ಆತ್ಮೀಯ ಸದಸ್ಯರಂತೆ ತಮ್ಮ ಗಮನವನ್ನು ತೋರಿದರು.
ಈ ಸಂದರ್ಭದಲ್ಲಿ, ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿಯ ಸಾಹಿತ್ಯ ಭಂಡಾರ ಪ್ರಕಟಿತ “Temple Treasures: A Journey Through Time” ಪುಸ್ತಕವನ್ನು ನೆನಪಿನ ಉಡುಗೊರೆಯಾಗಿ ಪ್ರಧಾನಮಂತ್ರಿಗಳಿಗೆ ನೀಡಿ ಗೌರವ ವ್ಯಕ್ತಪಡಿಸಿದರು.
ಶ್ರೀ ಶೆಟ್ಟರ್ ಅವರು ಸವದತ್ತಿಯ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ₹100 ಕೋಟಿ ಅನುದಾನದ ಕುರಿತು ಧನ್ಯವಾದಗಳನ್ನು ತಿಳಿಸಿದರು. ಅಷ್ಟೇ ಅಲ್ಲದೆ, ರಾಮದುರ್ಗದಲ್ಲಿರುವ ಐತಿಹಾಸಿಕ ಶಬರಿ ಕೊಳ್ಳದ ಅಭಿವೃದ್ಧಿ ಪ್ರಸ್ತಾವನೆ ಬಗ್ಗೆ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲೆಯ ಜನತೆಯ ಬಹುಕಾಲದ ಬೇಡಿಕೆ ವಿಚಾರವಾಗಿ, ಬೆಂಗಳೂರು-ಧಾರವಾಡ ನಡುವೆ ಸಂಚರಿಸುತ್ತಿರುವ ವಂದೇ ಭಾರತ ಎಕ್ಸ್‌ಪ್ರೆಸ್ ರೈಲಿನ ಮಾರ್ಗವನ್ನು ಬೆಳಗಾವಿಯವರೆಗೆ ವಿಸ್ತರಿಸುವಂತೆ ಪ್ರಧಾನಮಂತ್ರಿಗಳಿಗೆ ಮನವಿ ಮಾಡಿದರು.
ಇದೇ ರೀತಿಯಲ್ಲಿ, ಉಡಾನ್ 3.0 ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿ, ಬೆಳಗಾವಿ ಮತ್ತು ಇತರ ಟಿಯರ್-2 ನಗರಗಳಲ್ಲಿ ವಿಮಾನಯಾನ ಸೇವೆಗಳಿಗೆ ಪೂರಕವಾಗಿ ಕ್ರಮ ತೆಗೆದುಕೊಳ್ಳುವಂತೆ ವಿನಂತಿಸಿದರು.
ಪ್ರಧಾನಮಂತ್ರಿಗಳ ಪ್ರತಿಕ್ರಿಯೆ
ಪ್ರಧಾನಮಂತ್ರಿ ಮೋದಿಜಿಯವರು ಎಲ್ಲಾ ಮನವಿಗಳನ್ನು ಗಮನವಿಟ್ಟು ಆಲಿಸಿ, ಸಂಬಂಧಿಸಿದ ಸಚಿವರಿಗೆ ಅವಶ್ಯವಾದ ಸೂಚನೆ ನೀಡುವ ಭರವಸೆಯನ್ನು ನೀಡಿದರು.