ಬೆಂಗಳೂರು: ಜುಲೈ 15ರಂದು ಮೃತರಾದ ಬಿ. ಸರೋಜಾದೇವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸುದ್ದಿಯನ್ನು ಮುಖ್ಯಮಂತ್ರಿ ಕಚೇರಿಯ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ (Chief Minister of Karnataka) ಕನ್ನಡದಲ್ಲಿ ಪೋಸ್ಟ್ ಮಾಡಲಾಗಿತ್ತು. ಆದರೆ, ಕೆಲವರ ಫೀಡ್‌ನಲ್ಲಿ ಇದು ಇಂಗ್ಲೀಷ್‌ಗೆ ತಪ್ಪು ಭಾಷಾಂತರವಾಗಿ ಕಾಣಿಸಿಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.
ಈ ತಪ್ಪು ಭಾಷಾಂತರದಿಂದ ಅಪಾರ್ಥ ಉಂಟಾಗಿ, ಕಚೇರಿಯಿಂದ ಇಂಗ್ಲೀಷ್ ಪೋಸ್ಟ್ ಮಾಡಲಾಗಿದೆ ಎಂದು ಭಾವಿಸಿ ಕೆಲವರು ಟೀಕೆ-ಟಿಪ್ಪಣಿ ಮಾಡಿದ್ದನ್ನು ಗಮನಿಸಿದ ನಾನು, ಈ ಗೊಂದಲ ಬಗ್ಗೆ ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. “ಫೇಸ್‌ಬುಕ್‌ನ ಸ್ವಯಂ ಅನುವಾದ (ಆಟೋ ಟ್ರಾನ್ಸ್‌ಲೇಷನ್) ವೈಶಿಷ್ಟ್ಯವೇ ಈ ಸಮಸ್ಯೆಗೆ ಕಾರಣ. ಈ ಆಯ್ಕೆಯನ್ನು ಖಾತೆದಾರರು ನಿಯಂತ್ರಿಸಲು ಸಾಧ್ಯವಿಲ್ಲ. ಇದರಿಂದ ಯಾವುದೇ ಭಾಷೆಯಲ್ಲಿ ಓದುವವರು ತಮ್ಮ ಆಯ್ಕೆಯಲ್ಲಿ ಭಾಷಾಂತರಿಸಿಕೊಳ್ಳಬಹುದು, ಆದರೆ ಈ ಪ್ರಕ್ರಿಯೆಯಲ್ಲಿ ದೋಷ ಕಂಡುಬಂದಿದೆ” ಎಂದು ವಿವರಿಸಿದ್ದಾರೆ.
ಕಚೇರಿಯ ಕನ್ನಡ ಪೋಸ್ಟ್ ಕೆಲವರ ಫೀಡ್‌ನಲ್ಲಿ ಇಂಗ್ಲೀಷ್‌ಗೆ ತಪ್ಪಾಗಿ ಭಾಷಾಂತರಗೊಂಡಿದ್ದು, ಈ ದೋಷಯುಕ್ತ ಭಾಷಾಂತರವನ್ನು ನೋಡಿ ಕೆಲವರು ‘See Original Post’ ಆಯ್ಕೆಯ ಮೂಲಕ ಮೂಲ ಕನ್ನಡ ಪೋಸ್ಟ್ ಪರಿಶೀಲಿಸಿ ಸತ್ಯ ಗ್ರಹಿಸಿದ್ದಾರೆ. ಇದೇ ವೇಳೆ, ಫೇಸ್‌ಬುಕ್‌ನ ಆಟೋ ಟ್ರಾನ್ಸ್‌ಲೇಷನ್‌ನ ದೋಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆ ಗಮನಕ್ಕೆ ಬಂದ ಕೂಡಲೆ, ಮಾಧ್ಯಮ ಸಲಹೆಗಾರರು ಮೆಟಾ ಸಂಸ್ಥೆಯವರನ್ನು ಸಂಪರ್ಕಿಸಿ ದೋಷ ಸರಿಪಡಿಸುವಂತೆ ಮನವಿ ಮಾಡಿದ್ದು, ಮೆಟಾ ತಮ್ಮ ತಪ್ಪಿಗೆ ಕ್ಷಮೆಯೊಂದಿಗೆ ಸರಿಪಡಿಸುವುದಾಗಿ ಇ-ಮೈಲ್ ಮೂಲಕ ತಿಳಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಹಿಂದೆಯೂ ಮೆಟಾ/ಫೇಸ್‌ಬುಕ್ ಸ್ವಯಂ ಭಾಷಾಂತರದಿಂದ ಜಾಗತಿಕ ಮಟ್ಟದಲ್ಲಿ ಎಡವಟ್ಟುಗಳು ಸಂಭವಿಸಿದ್ದು, ಮಲೇಷಿಯಾ (2024), ಮಯನ್ಮಾರ್ (2018), ಪ್ಯಾಲೇಸ್ತೀನ್ (2017) ಸೇರಿದಂತೆ ಇತರೆ ದೇಶಗಳಲ್ಲಿ ವಿರೋಧ ಎದುರಿಸಿದೆ. ಭಾರತದಲ್ಲಿ ದಶಕಗಳಿಂದ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ದೊಡ್ಡದಾಗಿದ್ದರೂ, ಮೂಲ ಭಾಷೆಯ ಅರ್ಥವನ್ನು ಬದಲಾಯಿಸುವ ಭಾಷಾಂತರವು ವಿಷಾದನೀಯ ಎಂದು ಅವರು ಗಮನಿಸಿದ್ದಾರೆ.
“ಕೆಲವರು ಈ ತಪ್ಪನ್ನು ಸ್ಕ್ರೀನ್‌ಶಾಟ್ ತೆಗೆದು ತಪ್ಪು ಮಾಹಿತಿ ಹರಡುತ್ತಿದ್ದು, ಇದರಲ್ಲಿ ವಿರೋಧ ಪಕ್ಷದ ಶಾಸಕರು, ಮಾಜಿ ಸಚಿವರೂ ಇದ್ದಾರೆ. ಇಂತಹ ಕಿಡಿಗೇಡಿತನದಿಂದ ಗೊಂದಲಕ್ಕೆ ಒಳಗಾಗಬಾರದು ಎಂದು ಮನವಿ ಮಾಡುತ್ತೇನೆ. ಮೆಟಾ ಈ ದೋಷ ಸರಿಪಡಿಸಲು ಗಂಭೀರ ಕ್ರಮ ಕೈಗೊಳ್ಳುತ್ತದೆ ಎಂದು ನಂಬುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.