ಮಂಡ್ಯ: ಬಿಜೆಪಿ ನಾಯಕ ಆರ್. ಅಶೋಕ್ ಮಾಡಿದ ಫೋನ್ ಕದ್ದಾಲಿಕೆ ಆರೋಪಗಳ ವಿರುದ್ಧ ಸಚಿವ ಎನ್. ಚಲುವರಾಯಸ್ವಾಮಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ಯಾವುದಾದರೂ ಸಾಬೀತು ಮಾಡಿದರೆ ನಾನು ಉತ್ತರ ಕೊಡ್ತೀನಿ. ಗಾಳಿಯಲ್ಲಿ ಗುಂಡು ಹೊಡೆದರೆ ಏನೂ ಪ್ರಯೋಜನ ಇಲ್ಲ” ಎಂದು ಅವರು ಹೇಳಿದ್ದಾರೆ.
“ಫೋನ್ ಕದ್ದಾಲಿಕೆ ಮಾಡಿದ್ದರೆ, ಅದಕ್ಕೆ ಕ್ರೆಡಿಟ್ ಬಿಜೆಪಿ ಹಾಗೂ ಜೆಡಿಎಸ್‌ಗೇ ಸಲ್ಲಬೇಕು. ನಮ್ಮ ಸರ್ಕಾರ ಏನಾದರೂ ಮಾಡಿರೋದು ಪ್ರೂವ್ ಮಾಡಲಿ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಏನೂ ನಡೆಯುತ್ತಿಲ್ಲ. ಸಿದ್ದರಾಮಯ್ಯ ಇವತ್ತು ನಾಯಕರು, ಮುಂದೆಯೂ ಅವರು ನಾಯಕರಾಗುತ್ತಾರೆ. ಸಿಎಂ ಬದಲಾವಣೆ ಮಾಡುವ ವಿಚಾರ ನಮ್ಮ ಪಕ್ಷದ ಹೈಕಮಾಂಡ್ ನಿರ್ಧಾರ, ಬಿಜೆಪಿಗೆ ಈ ಬಗ್ಗೆ ಯಾಕೆ ಚಿಂತೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಹನಿಟ್ರ್ಯಾಪ್ ಗ್ಯಾರಂಟಿ ಆರೋಪಕ್ಕೆ ಸಚಿವರ ತಿರುಗೇಟು
ಬಿಜೆಪಿ ಕಾಂಗ್ರೆಸ್ ಸರ್ಕಾರದಿಂದ ಹನಿಟ್ರ್ಯಾಪ್ ಗ್ಯಾರಂಟಿ ಎಂಬ ಆರೋಪ ಮಾಡಿದ ಹಿನ್ನೆಲೆಯಲ್ಲಿ, ಸಚಿವ ಚಲುವರಾಯಸ್ವಾಮಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
“ಬಿಜೆಪಿಯವರಿಗೆ ಕೈಯಲ್ಲಿ ಏನೂ ಆಗದೇ ಇದ್ದಾಗ ಈ ರೀತಿಯ ಆರೋಪ ಮಾಡುತ್ತಾರೆ. ಐದು ವರ್ಷದಲ್ಲಿ ರಾಜ್ಯಕ್ಕಾಗಿ ಬಿಜೆಪಿ ಮಾಡಿದ ಕಾರ್ಯಕ್ರಮಗಳೇನು? ಇಲ್ಲಸಲ್ಲದ ವಿಚಾರದಲ್ಲಿ ಪ್ರತಿಭಟನೆ ಮಾಡೋದು ನಿಲ್ಲಿಸಬೇಕು. ಜನರಿಗೆ ಅನುಕೂಲವಾಗುವ ವಿಷಯದಲ್ಲಿ ಬಿಜೆಪಿ ಪ್ರತಿಭಟನೆ ಮಾಡಿಲ್ಲ” ಎಂದು ಅವರು ಟೀಕಿಸಿದರು.
“ಬಿಜೆಪಿ ಮಾಡಿರುವುದೆಲ್ಲಾ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ವಿರುದ್ಧ ಕೇವಲ ರಾಜಕೀಯ ದಾಳಿಯಷ್ಟೆ” ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ಮುಸ್ಲಿಂ ಮೀಸಲಾತಿ ಕುರಿತ ಚರ್ಚೆಗೆ ಪ್ರತಿಕ್ರಿಯೆ
ರಾಜ್ಯಸಭೆಯಲ್ಲಿ ಮುಸ್ಲಿಂ ಮೀಸಲಾತಿ ವಿಚಾರ ಚರ್ಚೆಗೆ ಬಂದಿದ್ದು, ಈ ಕುರಿತು ಸಚಿವ ಚಲುವರಾಯಸ್ವಾಮಿ “ನಾವು ಯಾರಿಗೂ ಅನ್ಯಾಯ ಮಾಡಲ್ಲ, ಎಲ್ಲಾ ಸಮುದಾಯಕ್ಕೂ ನ್ಯಾಯ ಕೊಡ್ತೀವಿ” ಎಂದು ಸ್ಪಷ್ಟನೆ ನೀಡಿದ್ದಾರೆ.
“ಐದು ಗ್ಯಾರಂಟಿಗಳನ್ನು ಮುಸ್ಲಿಮರು ಮಾತ್ರ ತಗೋತಾರ? ನಮ್ಮ ಯೋಜನೆಗಳನ್ನು ಮುಸ್ಲಿಮರು ಮಾತ್ರ ಬಳಸುತ್ತಾರಾ? ಬಡ್ಡಿರಹಿತ ಸಾಲ ಪಡೆಯುವವರು ೯೯% ಮುಸ್ಲಿಮರೇ ಆಗಿದ್ದಾರಾ? ಈ ಪ್ರಶ್ನೆಗಳಿಗೆ ಉತ್ತರ ಬೇಕು. ಸಂವಿಧಾನ ಬದಲಾವಣೆ ಮಾಡ್ತೀನಿ ಎಂದು ಹೇಳಿದ್ದು ಬಿಜೆಪಿ” ಎಂದು ಅವರು ಹೇಳಿದರು.
“ಜೆಡಿಎಸ್ ಮುಸ್ಲಿಂ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿತ್ತು. ಈಗ ಬಿಜೆಪಿಯ ಜೊತೆ ನಿಲ್ಲುತ್ತಿಲ್ಲ ಎನ್ನುತ್ತಿದ್ದಾರೆ. ಅವರಿಬ್ಬರ ನಡುವೆ ಜಗಳವಿದೆ. ಅದನ್ನು ಸರಿಪಡಿಸುವ ಕೆಲಸವನ್ನು ಆರ್. ಅಶೋಕ್ ಮಾಡಲಿ. ಎಲ್ಲರಿಗೂ ಮೀಸಲಾತಿ ಇದೆ, ಕೇಂದ್ರ ಸರ್ಕಾರ ಅದನ್ನು ತೆಗೆದುಹಾಕಬೇಕಾದರೆ ಮೋದಿ ಹೊಸ ಕಾನೂನು ತರಲಿ, ನೋಡೋಣ” ಎಂದು ಅವರು ಸವಾಲು ಹಾಕಿದರು.
ಹನಿಟ್ರ್ಯಾಪ್ ಪ್ರಕರಣದ ಚರ್ಚೆ: ಮಂಡ್ಯದಲ್ಲಿ ಸಚಿವರ ಪ್ರತಿಕ್ರಿಯೆ
ಹನಿಟ್ರ್ಯಾಪ್ ಪ್ರಕರಣದ ವಿಚಾರ ವಿಧಾನಸಭೆ ಹಾಗೂ ಬಜೆಟ್ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಸಿಕ್ಕಿಲ್ಲ ಎಂಬ ಹಿನ್ನೆಲೆಯಲ್ಲಿ, ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, “ಯಶಸ್ವಿ ಬಜೆಟ್ ವಿಚಾರವನ್ನು ಡೈವರ್ಟ್ ಮಾಡಲು ಈ ಚರ್ಚೆ ಮುಂದೂಡಲಾಯಿತು” ಎಂದರು.
ಮಂಡ್ಯದಲ್ಲಿ ನಾಳೆ ಛತ್ರಿ ಚಳುವಳಿ ಕುರಿತು ಮಾತನಾಡಿದ ಅವರು, “ನಾವು ಹೋರಾಟಕ್ಕೆ ವಿರೋಧಿಗಳಲ್ಲ. ಆದರೆ, ಆಕಸ್ಮಿಕವಾಗಿ ಮಾತನಾಡಿದರೂ, ದೊಡ್ಡ ಪ್ರಮಾಣದಲ್ಲಿ ಆ ವಿಚಾರ ಚರ್ಚೆ ಮಾಡುವುದು ಬೇಡ” ಎಂದು ಮನವಿ ಮಾಡಿದರು.
“ನನ್ನ ಮಾತಿನಿಂದ ಮಂಡ್ಯ ಜನತೆಗೆ ನೋವಾಗಿದ್ದರೆ, ನಾನು ವಿಷಾದ ವ್ಯಕ್ತಪಡಿಸುತ್ತೇನೆ. ದಯವಿಟ್ಟು ಹೋರಾಟ ಕೈ ಬಿಡಿ. ಡಿ.ಕೆ. ಶಿವಕುಮಾರ್ ಅವರು ಮಂಡ್ಯ ಜಿಲ್ಲೆಯನ್ನು ಕೈಬಿಡೋದು ಇಲ್ಲ. ಅವರು ಅಸಭ್ಯವಾಗಿ ನಡೆದುಕೊಳ್ಳಲ್ಲ, ಜಿಲ್ಲೆಯ ಗೌರವವನ್ನು ಕಾಪಾಡುತ್ತಾರೆ” ಎಂದು ಅವರು ಹೇಳಿದರು.
ಈ ಎಲ್ಲಾ ರಾಜಕೀಯ ಬೆಳವಣಿಗೆಗಳು ರಾಜ್ಯದ ರಾಜಕೀಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸುತ್ತಿವೆ.