ಬೆಂಗಳೂರು: ನಗರದ ಫ್ರೀಡಂ ಪಾರ್ಕ್‌ನ ಐತಿಹಾಸಿಕ ಕಾಂಪೌಂಡ್ ಗೋಡೆಯನ್ನು ನೆಲಸಮ ಮಾಡಿದ್ದಕ್ಕೆ ಹಾಗೂ ದೊಡ್ಡ ಮರಗಳನ್ನು ಕಡಿದು ಪರಿಸರಕ್ಕೆ ಹಾನಿಯುಂಟುಮಾಡಿದ ಆರೋಪದ ಮೇಲೆ ಬಿಜೆಪಿಯಿಂದ ಉಪ್ಪಾರಪೇಟೆ ಪೊಲೀಸ್ ಠಾಣೆ ಮತ್ತು ಬಿಬಿಎಂಪಿ ಅರಣ್ಯಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಫ್ರೀಡಂ ಪಾರ್ಕ್‌ನ ಪ್ರಾಚೀನ ಕಾಂಪೌಂಡ್ ಗೋಡೆಯನ್ನು ಧ್ವಂಸಗೊಳಿಸಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಕೃತ್ಯಕ್ಕೆ ಕಾರಣಕರ್ತರಾದ ಕಾರ್ಯಕ್ರಮ ಆಯೋಜಕರು ಮತ್ತು ಸಂಬಂಧಿತ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಇದೇ ವೇಳೆ, ಪಾರ್ಕ್‌ನಲ್ಲಿ ದೊಡ್ಡ ಮರಗಳನ್ನು ಯಾವುದೇ ಅಧಿಕೃತ ಪರವಾನಗಿಯಿಲ್ಲದೇ ಕಡಿದು ಪರಿಸರಕ್ಕೆ ಹಾನಿಯುಂಟುಮಾಡಲಾಗಿದೆ ಎಂದು ಆರೋಪಿಸಿ ಬಿಬಿಎಂಪಿ ಅರಣ್ಯಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಆಡಳಿತ ಪಕ್ಷದಿಂದ ಅಧಿಕಾರ ದುರುಪಯೋಗ ಮಾಡಿಕೊಂಡು ಕಾನೂನುಬಾಹಿರವಾಗಿ ಮರಗಳನ್ನು ಕಡಿಯಲಾಗಿದೆ ಎಂದು ಬಿಜೆಪಿ ದೂರಿನಲ್ಲಿ ತಿಳಿಸಿದೆ. ಈ ದುಷ್ಕೃತ್ಯಕ್ಕೆ ಕಾರಣಕರ್ತರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಂಡು ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಲಾಗಿದೆ.
ಈ ದೂರಿನ ಸಂದರ್ಭದಲ್ಲಿ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪ್ರಕೋಷ್ಠಗಳ ರಾಜ್ಯ ಸಂಚಾಲಕ ದತ್ತಾತ್ರಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.