ಬೆಂಗಳೂರು: ಬಳ್ಳಾರಿ ರಸ್ತೆಯಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಧಿಕಾರಿಗಳು ಸಮನ್ವಯದಿಂದ ಕೂಡಲೇ ಪರಿಹಾರೋಪಾಯಗಳನ್ನು ರೂಪಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದ್ದಾರೆ.
ಉತ್ತರ ಬೆಂಗಳೂರಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮೆಟ್ರೋ ಕಾಮಗಾರಿ ಪೂರ್ಣಗೊಂಡ ಪ್ರದೇಶಗಳಲ್ಲಿನ ಭಗ್ನಾವಶೇಷಗಳು ಮತ್ತು ಅನುಪಯುಕ್ತ ಕಬ್ಬಿಣದ ವಸ್ತುಗಳನ್ನು ತೆರವುಗೊಳಿಸಿ ರಸ್ತೆಯನ್ನು ಸ್ವಚ್ಛಗೊಳಿಸುವಂತೆ ಮೆಟ್ರೋ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೆಬ್ಬಾಳ ಮೇಲ್ಸೇತುವೆಗೆ ಡಾಂಬರೀಕರಣ: ಹೆಬ್ಬಾಳ ಮೇಲ್ಸೇತುವೆಯ ಮೇಲ್ಭಾಗ ಹಾಳಾಗಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ತಕ್ಷಣ ಸಂಪೂರ್ಣ ಮೇಲ್ಸೇತುವೆಗೆ ಡಾಂಬರೀಕರಣ ಮಾಡಿ ಸಂಚಾರ ಸುಗಮಗೊಳಿಸಬೇಕು ಎಂದು ಆದೇಶಿಸಿದರು.
ರಸ್ತೆ ಮಧ್ಯೆ ಸ್ಲ್ಯಾಬ್ ದುರಸ್ತಿ: ಹೆಬ್ಬಾಳದಿಂದ ಕೊಡಿಗೆಹಳ್ಳಿ ಕಡೆಗೆ ಹೋಗುವ ಹಯಾತ್ ಸೆಂಟರ್ ಮುಂಭಾಗದ ರಸ್ತೆ ಮಧ್ಯಭಾಗದಲ್ಲಿರುವ ಸ್ಲ್ಯಾಬ್ ಸರಿಯಾಗಿ ಅಳವಡಿಸದೇ ಇರುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇದನ್ನು ತಕ್ಷಣ ದುರಸ್ತಿಪಡಿಸಬೇಕು ಎಂದು ಸೂಚಿಸಿದರು.
ಕೊಡಿಗೆಹಳ್ಳಿ ಸಿಗ್ನಲ್ ಬಳಿ ಮಳೆಗಾಲದಲ್ಲಿ ನೀರು ನಿಂತು ಸಮಸ್ಯೆ ಉಂಟಾಗುತ್ತಿರುವುದರಿಂದ ಕಲ್ವರ್ಟ್‌ನ ಹೂಳೆ ತೆಗೆದು ಶಾಶ್ವತ ಪರಿಹಾರ ಕಲ್ಪಿಸುವಂತೆ ಎನ್‌ಎಚ್‌ಎಐಗೆ ನಿರ್ದೇಶನ ನೀಡಿದರು.
ಸರ್ವೀಸ್ ರಸ್ತೆ-ಮುಖ್ಯ ರಸ್ತೆ ಸಂಪರ್ಕ: ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸರ್ವೀಸ್ ರಸ್ತೆಯಿಂದ ಮುಖ್ಯ ರಸ್ತೆಗೆ ಒಳಹೊಕ್ಕು-ಹೊರಬರುವ ಸಂಪರ್ಕ ವ್ಯವಸ್ಥೆಯನ್ನು ಬ್ಯಾಟರಾಯನಪುರದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಇದೇ ಮಾದರಿಯಲ್ಲಿ ಅಗತ್ಯವಿರುವ ಎಲ್ಲೆಡೆ ಸಂಪರ್ಕ ಕಲ್ಪಿಸಲು ಎನ್‌ಎಚ್‌ಎಐಗೆ ಪ್ರಸ್ತಾವ ಸಲ್ಲಿಸಿ ಅನುಮೋದನೆ ಪಡೆದು ಕಾರ್ಯಗತಗೊಳಿಸಬೇಕು ಎಂದು ತಿಳಿಸಿದರು.
ಸೈನೇಜ್ ಬೋರ್ಡ್ ಅಳವಡಿಕೆ: ಸರ್ವೀಸ್ ರಸ್ತೆ ಮತ್ತು ಮುಖ್ಯ ರಸ್ತೆ ಸಂಧಿಗಳಲ್ಲಿ ಸೂಚನಾ ಫಲಕಗಳನ್ನು (ಸೈನೇಜ್ ಬೋರ್ಡ್) ಅಳವಡಿಸಿ ನಾಗರಿಕರ ಸೌಲಭ್ಯಕ್ಕೆ ಒತ್ತು ನೀಡುವಂತೆ ಸೂಚಿಸಿದರು.
ಸ್ಕೈವಾಕ್ ಸಾಧ್ಯತೆ ಪರಿಶೀಲನೆ: ಬ್ಯಾಟರಾಯನಪುರ ಜಂಕ್ಷನ್‌ನಲ್ಲಿ ಬ್ಯಾರಿಕೇಡ್‌ಗಳಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವುದರಿಂದ ಅಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಸಾಧ್ಯತೆ ಪರಿಶೀಲಿಸುವಂತೆ ಆದೇಶಿಸಿದರು.
ಚರಂಡಿ ಸ್ವಚ್ಛತೆ ಮತ್ತು ದುರಸ್ತಿ: ಮುಖ್ಯ ರಸ್ತೆ ಮತ್ತು ಸರ್ವೀಸ್ ರಸ್ತೆ ನಡುವಿನ ಚರಂಡಿಗಳಲ್ಲಿರುವ ಹಾಳಾದ ಸ್ಲ್ಯಾಬ್‌ಗಳನ್ನು ದುರಸ್ತಿಪಡಿಸಿ, ಹೂಳೆ ತೆರವುಗೊಳಿಸುವಂತೆ ನಿರ್ದೇಶಿಸಿದರು.
ಯಲಹಂಕ ರೈಲ್ವೆ ಸೇತುವೆ ಬಳಿ ನೀರು ನಿಲ್ಲದಂತೆ ಕ್ರಮ: ಸೈಡ್ ಡ್ರೈನ್ ಎತ್ತರದಲ್ಲಿರುವುದರಿಂದ ಮಳೆನೀರು ರಸ್ತೆಯಲ್ಲಿ ನಿಂತುಕೊಳ್ಳುತ್ತಿದೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಆದೇಶಿಸಿದರು.
ಇತರ ಪ್ರಮುಖ ನಿರ್ದೇಶನಗಳು:
- ಯಲಹಂಕ ರೈತರ ಸಂತೆ ಬಳಿ ಸೈಡ್ ಡ್ರೈನ್ ನಿರ್ಮಾಣ
- ಬಾಗಲೂರು ಕ್ರಾಸ್‌ನಲ್ಲಿ ಜಲಾವೃತ ನಿವಾರಣೆ, ರಸ್ತೆ ದುರಸ್ತಿ ಮತ್ತು ಡ್ರೈನ್ ಸ್ವಚ್ಛತೆ
- ರಸ್ತೆಗಳಲ್ಲಿನ ಗುಂಡಿಗಳನ್ನು ತುಂಬಿಸುವುದು
- ಅಲ್ಲಾಳಸಂದ್ರ ಗೇಟ್ ಬಳಿ ಎನ್‌ಎಚ್‌ಎಐ ಮೇಲ್ಸೇತುವೆ ಕೆಳಭಾಗದ ಖಾಲಿ ಜಾಗ ಸುಂದರೀಕರಣ
- ಬ್ಯಾಟರಾಯನಪುರದಿಂದ ಕೊಡಿಗೆಹಳ್ಳಿ ಸಿಗ್ನಲ್‌ವರೆಗೆ ರಸ್ತೆ ದುರಸ್ತಿ ಮತ್ತು ಸ್ವಚ್ಛತೆ
ಪರಿಶೀಲನೆಯ ಸಂದರ್ಭದಲ್ಲಿ ಉತ್ತರ ವಲಯ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಮುಖ್ಯ ಅಭಿಯಂತರರು ರಂಗನಾಥ್, ಯಮುನಾ, ಬಿಎಂಆರ್‌ಸಿಎಲ್ ಮತ್ತು ಎನ್‌ಎಚ್‌ಎಐ ಅಧಿಕಾರಿಗಳು ಉಪಸ್ಥಿತರಿದ್ದರು.












