ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ), ಕ್ವಾಂಟಂ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ, ಬಯೋ ಟೆಕ್ನಾಲಜಿ, ಸ್ಮಾರ್ಟ್ ಸಿಟಿ, ಉನ್ನತ ಶಿಕ್ಷಣ ಮತ್ತು ಸುಸ್ಥಿರ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಸಾಧಿಸುವ ಉದ್ದೇಶದಿಂದ ಜರ್ಮನಿಯ ಬವೇರಿಯಾ ಪ್ರಾಂತ್ಯ ಮತ್ತು ಕರ್ನಾಟಕ ಸರ್ಕಾರ ಮಂಗಳವಾರ ಪ್ರಮುಖ ಒಡಂಬಡಿಕೆಗೆ ಸಹಿ ಹಾಕಿವೆ.
ಈ ಒಡಂಬಡಿಕೆಗೆ ರಾಜ್ಯ ಸರ್ಕಾರದ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸಹಿ ಹಾಕಿದರೆ, ಬವೇರಿಯಾ ಪರವಾಗಿ ಚಾನ್ಸಲರಿ ಮುಖ್ಯಸ್ಥ ಡಾ. ಪ್ಲೋರಿಯನ್ ಹರ್ಮನ್ ಸಹಿ ಹಾಕಿದರು.

ಐದು ವರ್ಷಗಳ ಸಹಕಾರದ ಯೋಜನೆ
ಸಮಾರಂಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ ಅವರು, “ಈ ಒಡಂಬಡಿಕೆ ಮುಂದಿನ ಐದು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ. ಇಂಡಸ್ಟ್ರಿ 4.0, ಬಾಹ್ಯಾಕಾಶ, ವೈದ್ಯಕೀಯ ತಂತ್ರಜ್ಞಾನ, ಪರಿಸರ ತಂತ್ರಜ್ಞಾನ, ನಗರ ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಸೈಬರ್ ಸೆಕ್ಯುರಿಟಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಸ್ಥಾಪನೆಯಾಗಲಿದೆ” ಎಂದು ತಿಳಿಸಿದರು.
ಬವೇರಿಯಾ–ಕರ್ನಾಟಕ ಬಾಂಧವ್ಯ ವಿಸ್ತಾರ
ಬವೇರಿಯಾ ಪ್ರತಿನಿಧಿಗಳಿಗೆ ರಾಜ್ಯದ ಕೈಗಾರಿಕಾ ಪರಿಸರ ಹಾಗೂ ಹೂಡಿಕೆ ಸಾಧ್ಯತೆಗಳ ಬಗ್ಗೆ ಸಾದ್ಯಂತವಾಗಿ ಮಾಹಿತಿ ನೀಡಲಾಯಿತು. ನಿರ್ದಿಷ್ಟ ಕ್ಷೇತ್ರಗಳಲ್ಲಿ ಕಾರ್ಯೋನ್ಮುಖ ಕೆಲಸಗಳಿಗಾಗಿ ಕಾರ್ಯಪಡೆ ರಚನೆಗೆ ತೀರ್ಮಾನಿಸಲಾಯಿತು. ಈ ಮೂಲಕ ಎರಡು ಪ್ರಾಂತ್ಯಗಳ ನಡುವಿನ ದೀರ್ಘಕಾಲಿಕ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ. ಬವೇರಿಯಾ–ಕರ್ನಾಟಕ ಸಂಬಂಧ 2007ರಿಂದಲೂ ವಾಣಿಜ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ. 2001ರಿಂದ ಬವೇರಿಯಾ ಪ್ರತಿನಿಧಿ ಕಚೇರಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಜರ್ಮನಿಯೊಂದಿಗೆ ನವೋದ್ಯಮ ಸಹಕಾರ – ಪ್ರಿಯಾಂಕ್ ಖರ್ಗೆ
ಸಮಾರಂಭದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಕರ್ನಾಟಕದ ಐಟಿ-ಬಿಟಿ ಇಲಾಖೆ ಜರ್ಮನಿಯೊಂದಿಗೆ ನವೋದ್ಯಮ ಕ್ಷೇತ್ರದಲ್ಲಿ ಸಹಕರಿಸುತ್ತಿದೆ. ರಾಜ್ಯದಲ್ಲಿ ಸಂಶೋಧನೆ ಹಾಗೂ ಯೂನಿಕಾರ್ನ್ ಸ್ಟಾರ್ಟ್-ಅಪ್ಗಳು ಸಮೃದ್ಧವಾಗಿವೆ. ಜರ್ಮನ್ ಭಾಷೆ ಕಲಿಯುವುದು ಅಗತ್ಯವೆನಿಸಿದರೆ, ಅದರಲ್ಲೂ ಸಹಾಯ ಮಾಡಲು ನಾವು ಸಿದ್ಧವಿದ್ದೇವೆ” ಎಂದು ಹೇಳಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಸತ್ಯವತಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.