ಬೆಳಗಾವಿ, ಏಪ್ರಿಲ್ 30: ಜಗತ್ತಿನ ಶ್ರೇಷ್ಠ ದಾರ್ಶನಿಕರಾದ ಬಸವಣ್ಣನವರ ತತ್ವ ಆದರ್ಶಗಳು ಕೇವಲ ಆಚರಣೆಗೆ ಸೀಮಿತವಾಗದೆ, ಎಲ್ಲರೂ ಜೀವನದಲ್ಲಿ ಅನುಕರಣೆ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯ ಶ್ರೀ ಬಸವೇಶ್ವರ ಉದ್ಯಾನವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಬುಧವಾರ ಆಯೋಜಿಸಲಾದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, “ಬಸವಣ್ಣನವರ ಬಗ್ಗೆ ಮಾತನಾಡಲು ಒಂದು ದಿನ ಸಾಕಾಗದು, ದಿನಗಟ್ಟಲೇ ಮಾತನಾಡಬಹುದು. ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾದರಿಯಾಗಿವೆ,” ಎಂದರು.
ಜಾತಿರಹಿತ ಸಮಾಜದ ಕನಸು ಕಂಡ ಬಸವಣ್ಣನವರು, ಮೇಲು-ಕೀಳು ಭೇದವನ್ನು ತಿರಸ್ಕರಿಸಿ, ಸಾಮಾಜಿಕ ಕ್ರಾಂತಿಯನ್ನು ಮುನ್ನಡೆಸಿದರು. “ಆದರೆ, ಇಂದು ನಾವು ಬಸವಣ್ಣನವರು ತೋರಿದ ಮಾರ್ಗವನ್ನು ಬಿಟ್ಟು, ಜಾತಿ-ಜಾತಿ ಎಂದು ವಿಭಜನೆಯ ಹಿಂದೆ ಬಿದ್ದಿದ್ದೇವೆ,” ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. “ಧರ್ಮ-ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಈ ಕಾಲದಲ್ಲಿ, ಬಸವಣ್ಣನ ವಿಚಾರಧಾರೆಯಿಂದ ಇಂತಹ ಒಡಕುಗಳನ್ನು ತಡೆಯಬಹುದು. ಜಾತಿ, ಮತ, ಲಿಂಗ ಭೇದವನ್ನು ಒಡಗೊಡದೆ, ಸಮಾನತೆಯನ್ನು ಸಾರಿದ ಬಸವಣ್ಣನವರು 12ನೇ ಶತಮಾನದಲ್ಲೇ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದರು,” ಎಂದು ಸಚಿವರು ತಿಳಿಸಿದರು.
ಬಸವಾದಿ ಶರಣರು ಸಮಾಜ ಸುಧಾರಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಆದರೆ, ಇಂದು ಸ್ವಾರ್ಥ, ಸುಳ್ಳು, ಮೋಸದ ಪ್ರವೃತ್ತಿಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಸಚಿವರು, ಬಸವಣ್ಣನವರ ತತ್ವಗಳನ್ನು ಅನುಸರಿಸುವಂತೆ ತಮ್ಮ ಮಗ ಮೃಣಾಲ್ ಹೆಬ್ಬಾಳಕರ್‌ಗೂ ಸಲಹೆ ನೀಡಿರುವುದಾಗಿ ಹೇಳಿದರು. “ರಾಜಕಾರಣದಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ, ಬಸವಾದಿ ಶರಣರ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ,” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರತ್ನಪ್ರಭಾ ಬೆಲ್ಲದ, ಬಸವರಾಜ ಜಗಜಂಪಿ, ಡಾ.ಎಚ್.ಬಿ.ರಾಜಶೇಖರ, ವಿಜಯಕುಮಾರ ಹೊನಕೇರಿ, ಆರ್.ಪಿ.ಪಾಟೀಲ, ಮುರಘೇಂದ್ರಗೌಡ ಪಾಟೀಲ, ಮೃಣಾಲ್ ಹೆಬ್ಬಾಳಕರ್, ವಿದ್ಯಾವತಿ ಭಜಂತ್ರಿ, ಅನಂತ ಬ್ಯಾಕೊಡ್, ಉದಯಕುಮಾರ್ ತಳವಾರ, ಸೋಮಲಿಂಗ ಮಾವಿನಕಟ್ಟಿ, ಮಲಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿಧಾನಸೌಧದಲ್ಲಿ ಬಸವಣ್ಣನವರಿಗೆ ಸಿಎಂ ಸಿದ್ದರಾಮಯ್ಯರಿಂದ ಪುಷ್ಪ ನಮನ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವ ಜಯಂತಿಯ ಅಂಗವಾಗಿ ವಿಧಾನಸೌಧದ ಪೂರ್ವಭಾಗದಲ್ಲಿರುವ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಉಪಸ್ಥಿತರಿದ್ದರು. ಇದಕ್ಕೂ ಮೊದಲು, ಇಬ್ಬರೂ ನಾಯಕರು ಬಸವೇಶ್ವರ ವೃತ್ತದಲ್ಲಿರುವ ಅಶ್ವಾರೂಢ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.