ಬೆಳಗಾವಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಗೆ ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಇ-ಡ್ರೈವ್’ (PM e-DRIVE) ಯೋಜನೆಯಡಿ ೪,೫೦೦ ವಿದ್ಯುತ್ ಚಾಲಿತ ಬಸ್‌ಗಳನ್ನು ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (ಜಿಸಿಸಿ) ಮಾದರಿಯಲ್ಲಿ ಪೂರೈಕೆ ಮಾಡಲು ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸದಸ್ಯ ಎಚ್.ಎಸ್. ಗೋಪಿನಾಥ್ ರವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, “ಬಿಎಂಟಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ ೨೫ ಕಿ.ಮೀ. ಒಳಗೆ ಸೇವೆ ಸಲ್ಲಿಸುತ್ತಿದೆ. ನಗರ ಮತ್ತು ಹೊರವಲಯದ ಪ್ರಯಾಣಿಕರಿಗೆ ಉತ್ತಮ, ಸುಲಭ ಮತ್ತು ಸುರಕ್ಷಿತ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತಿದೆ” ಎಂದರು.
ಪ್ರಸ್ತುತ ಬಿಎಂಟಿಸಿ ೧,೮೧೭ ಮಾರ್ಗಗಳಲ್ಲಿ ೬,೨೭೪ ಅನುಸೂಚಿಗಳನ್ನು ನಡೆಸುತ್ತಿದ್ದು, ದಿನನಿತ್ಯ ೬೫,೯೩೪ ಸುತ್ತುಗಳನ್ನು ಓಡಿಸಿ ೧೩ ಲಕ್ಷ ಕಿ.ಮೀ. ದೂರ ಕ್ರಮಿಸುತ್ತಿದೆ. ಸರಾಸರಿ ೪೪ ಲಕ್ಷ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ೨೦೨೫ ನವೆಂಬರ್ ಅಂತ್ಯಕ್ಕೆ ಸಂಸ್ಥೆಯಲ್ಲಿ ೭,೦೫೧ ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಮಾಹಿತಿ ನೀಡಿದರು.
ಬಿಎಂಟಿಸಿ ಬಸ್‌ಗಳಲ್ಲಿ ಜಾಹೀರಾತು: ಹೊಸ ಟೆಂಡರ್ ಮೂಲಕ ಆದಾಯ ಹೆಚ್ಚಿಸುವ ಯತ್ನ
ಬಿಎಂಟಿಸಿ ಸಾರಿಗೇತರ ಆದಾಯ ವೃದ್ಧಿಸಲು ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶಿಸಲು ಪ್ರೊಕ್ಯೂರ್‌ಮೆಂಟ್ ಟೆಂಡರ್ ಕರೆಯಲಾಗುತ್ತಿದೆ. ಆಯ್ದ ಏಜೆನ್ಸಿಗಳಿಗೆ ನಿಗದಿತ ಅವಧಿಗೆ ಮತ್ತು ನಿಯಮಗಳಿಗೊಳಪಟ್ಟು ಪರವಾನಗಿ ನೀಡಲಾಗುವುದು. ಪರವಾನಗಿ ಶುಲ್ಕದ ಜೊತೆಗೆ ಪ್ರತಿ ಬಸ್‌ಗೆ ಅನ್ವಯವಾಗುವ ಇತರ ಶುಲ್ಕವನ್ನೂ ಪಾವತಿಸಬೇಕಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ರಾಜ್ಯ ಸಾರಿಗೆ ನಿಗಮಗಳಿಗೆ ಈ ಹಣಕಾಸು ಸಾಲಿನಲ್ಲಿ ೬೫೦ ಹೊಸ ಬಸ್‌ಗಳ ಸೇರ್ಪಡೆ
ಪ್ರಸ್ತುತ ಆರ್ಥಿಕ ಸಾಲಿನಲ್ಲಿ ರಾಜ್ಯದ ನಾಲ್ವರು ಸಾರಿಗೆ ನಿಗಮಗಳಿಗೆ ಒಟ್ಟು ೬೫೦ ಹೊಸ ಬಸ್‌ಗಳನ್ನು ಖರೀದಿಸಲು ಆರ್ಥಿಕ ಇಲಾಖೆ ಸೂಚಿಸಿದೆ. ಅದರಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಕೆಎಸ್‌ಆರ್‌ಟಿಸಿ) ೫೦೦ ಡೀಸೆಲ್ ಬಸ್ ಹಾಗೂ ೧೪೪ ನಗರ ಸಾರಿಗೆ ಮಾದರಿ ವಾಹನಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆ ಪ್ರಸ್ತಾಪನೆ ಪರಿಶೀಲನೆಯಲ್ಲಿದೆ.
ಈಗಾಗಲೇ ೫ ವೋಲ್ವೋ ಮಲ್ಟಿ-ಆಕ್ಸಲ್ ಸೀಟರ್, ೫ ಮಲ್ಟಿ-ಆಕ್ಸಲ್ ಸ್ಲೀಪರ್ ಬಸ್‌ಗಳನ್ನು ಖರೀದಿಸಲಾಗಿದೆ. ಇನ್ನು ೬೦ ನಾನ್-ಎಸಿ ಸ್ಲೀಪರ್ (ಪಲ್ಲವಿ) ಬಸ್‌ಗಳಿಗೆ ಖರೀದಿ ಆದೇಶ ಬಿಡುಗಡೆಯಾಗಿದ್ದು, ೨೦೨೬ ಮಾರ್ಚ್ ಒಳಗೆ ರಸ್ತೆಗಿಳಿಯಲಿವೆ ಎಂದು ಸಚಿವರು ತಿಳಿಸಿದರು.











