ಬೆಂಗಳೂರು: ಬಿಜೆಪಿಯ ಒಳಗಿನ ವೈಮನಸ್ಯವನ್ನು ಒಂದೇ ಹಂತದಲ್ಲಿ ಪರಿಹರಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ವ್ಯತ್ಯಾಸದ ಮನಸ್ಸುಗಳನ್ನು ಒಂದುಗೂಡಿಸಲು ತಾಳ್ಮೆಯಿಂದ ಕೆಲಸ ಮಾಡಬೇಕು. ಪಕ್ಷದ ಸಂಧಾನ ಸಭೆಗಳು ಒಂದಷ್ಟು ಯಶಸ್ವಿಯಾಗಿವೆ,” ಎಂದು ತಿಳಿಸಿದರು.
ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲಾ ಬಿಜೆಪಿ ಘಟಕಗಳ ವಿವಾದಗಳು ಬಹುತೇಕ ಶಮನಗೊಂಡಿವೆ ಎಂದು ಗೌಡ ತಿಳಿಸಿದರು. “ಇಂದು ದಾವಣಗೆರೆ ತಂಡ ಬಂದು ವರದಿ ನೀಡಿತು. ಎರಡೂ ಕೈ ಸೇರದೇ ಚಪ್ಪಾಳೆ ಆಗುವುದಿಲ್ಲ. ಯಾರನ್ನೋ ಟೀಕಿಸಿಯೇ ಮುಂದೆ ಹೋಗುವ ಮನಸ್ಥಿತಿ ಆಂತರಿಕ ವಲಯಕ್ಕೂ ಬಂದಿದೆ,” ಎಂದರು. ದಾವಣಗೆರೆಯಲ್ಲಿ ಸಿದ್ದೇಶ್ವರ ತಂಡದಿಂದ ಯಡಿಯೂರಪ್ಪ ವಿರುದ್ಧ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾಡಿದ ಹೇಳಿಕೆ ಸರಿಯಲ್ಲ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ರಾಹುಲ್ ಗಾಂಧಿಗೆ ‘ನ್ಯಾಯ ಯೋಧ’ ಎಂಬ ಬಿರುದು ನೀಡಿರುವ ವಿಚಾರವನ್ನು ಗೌಡ ಟೀಕಿಸಿದರು. “ನ್ಯಾಯ ಕೊಡುವ ಸ್ಥಾನಕ್ಕೆ ರಾಹುಲ್ ಗಾಂಧಿ ಇನ್ನೂ ಏರಿಲ್ಲ. ಅವರ ವಿಷಯಗಳನ್ನು ತಾರ್ಕಿಕವಾಗಿ ಕೊನೆಗೊಳಿಸಲು ಸಾಧ್ಯವೇ ಇಲ್ಲ. ಇದು ಹಾಸ್ಯಾಸ್ಪದ,” ಎಂದು ಅವರು ಕಿಡಿಕಾರಿದರು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಇಂತಹ ಸಣ್ಣಪುಟ್ಟ ಹೇಳಿಕೆಗಳು ಅವರ ಘನತೆಗೆ ಧಕ್ಕೆ ತಂದಿವೆ ಎಂದು ಗೌಡ ಆರೋಪಿಸಿದರು.
ಯತ್ನಾಳ್ ಅವರ ಹೊಸ ಪಕ್ಷ ಕಟ್ಟುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಗೌಡ, “ಹೊರಗೆ ಹೋದವರು ಏನು ಹೇಳುತ್ತಾರೆ ಎಂಬುದನ್ನು ಯೋಚಿಸಿಯೇ ನಾವು ಕ್ರಮ ತೆಗೆದುಕೊಂಡಿದ್ದೇವೆ. ನಮ್ಮ ಗುರಿ ಪಕ್ಷ ಸಂಘಟನೆ. ಯತ್ನಾಳ್ ಅವರನ್ನು ಸರಿಮಾಡಲು ಎಲ್ಲ ಪ್ರಯತ್ನ ಮಾಡಿದ್ದೇವು, ಆದರೆ ಸರಿಯಾಗದಿರುವುದು ದುರ್ದೈವ. ಪಕ್ಷದಿಂದ ಹೊರಗೆ ಹೋದವರು ತಮ್ಮ ದಾರಿ ಹುಡುಕಿಕೊಳ್ಳಲೇಬೇಕು,” ಎಂದು ತಿಳಿಸಿದರು.