ಉಡುಪಿ: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಜನರ ಬದುಕಿನ ಸಮಸ್ಯೆಗಳ ಬಗ್ಗೆ ಗಮನಹರಿಸದೇ, ಧರ್ಮ ಮತ್ತು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಶನಿವಾರ ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮಾವೇಶದ ಕುರಿತ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಕೃಷ್ಣನ ಆಶೀರ್ವಾದ ಪಡೆಯಲು ಉಡುಪಿಗೆ ಆಗಮಿಸಿದ್ದೀರಾ ಎಂದು ಕೇಳಿದಾಗ, ಶಿವಕುಮಾರ್ ಚಟಾಕಿಯಾಗಿ, “ಕೃಷ್ಣ, ಗಣಪತಿ ಮತ್ತು ನಿಮ್ಮ (ಮಾಧ್ಯಮಗಳ) ಆಶೀರ್ವಾದವೂ ಬೇಕು. ಎಲ್ಲರ ಆಶೀರ್ವಾದ ನನಗೆ ಅಗತ್ಯ” ಎಂದು ಉತ್ತರಿಸಿದರು.
ಸೆಪ್ಟೆಂಬರ್ ಕ್ರಾಂತಿ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರಾರ್ಥನೆಗೆ ಇದು ಸೂಕ್ತ ಕಾಲವೇ ಎಂದು ಪ್ರಶ್ನಿಸಿದಾಗ, “ಅಂತಹ ಚರ್ಚೆಗಳಿಗೆ ಯಾವುದೇ ಆಧಾರವಿಲ್ಲ. ಪ್ರಾರ್ಥನೆ ಎನ್ನುವುದು ನನ್ನ ಸಹಜ ಸ್ವಭಾವ. ಉಡುಪಿ ಕೃಷ್ಣಮಠದಿಂದ ಈ ಹಿಂದೆಯೂ ಆಹ್ವಾನ ಬಂದಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಆಹ್ವಾನಿಸಿದ್ದರು. ಆದರೆ, ಆಗ ಬರಲು ಸಾಧ್ಯವಾಗಿರಲಿಲ್ಲ. ಈಗ ಆಗಮಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು.