ಬೆಂಗಳೂರು: ಕರ್ನಾಟಕ ಬಿಜೆಪಿ ನಾಯಕರ ಅಸಮಾಧಾನ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಭಿನ್ನಮತೀಯ ನಾಯಕರು ನೇರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೇ ಸಂಪರ್ಕಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಅಮಿತ್ ಶಾ ಗೆ ಲಿಂಬಾವಳಿಯ ಚೀಟಿ
ಮಾಜಿ ಸಚಿವ ಅರವಿಂದ ಲಿಂಬಾವಳಿ, ಅಮಿತ್ ಶಾ ಅವರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜ್ಯ ಬಿಜೆಪಿ ರಾಜಕೀಯ ಪರಿಸ್ಥಿತಿಯ ಕುರಿತು ಚೀಟಿ ನೀಡಿದ್ದಾರೆ. ಇದಾದ ಬಳಿಕ ಶಾ ಅವರು ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿಜಯೇಂದ್ರ ಅವರೊಂದಿಗೆ ಕೆಲ ನಿಮಿಷ ಮಾತುಕತೆ ನಡೆಸಿದ್ದಾರೆ.
ದೆಹಲಿಗೆ ಬರುವಂತೆ ಸೂಚನೆ
ಶಾ ಅವರೊಂದಿಗೆ ಲಿಂಬಾವಳಿ ಪ್ರತ್ಯೇಕವಾಗಿ ಕೂಡ ಮಾತುಕತೆ ನಡೆಸಿದ್ದು, ನಂತರ ಅವರಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿದೆ. ಇದರಿಂದ ರಾಜ್ಯ ಬಿಜೆಪಿ ಭಿನ್ನಮತ ಮತ್ತು ಪಕ್ಷದ ಅಧ್ಯಕ್ಷ ಸ್ಥಾನ ಸಂಬಂಧ ಚರ್ಚೆಗಳು ದೆಹಲಿಯಲ್ಲಿಯೇ ಅಂತಿಮವಾಗುವ ಸಾಧ್ಯತೆ ಇದೆ.
ರೆಬೆಲ್ಸ್ ಟೀಂ ದೆಹಲಿಗೆ?
ಈ ಬೆಳವಣಿಗೆಯೊಂದಿಗೆ, ಅಸಮಾಧಾನಗೊಂಡ ಕೆಲ ಬಿಜೆಪಿ ನಾಯಕರು ಶೀಘ್ರದಲ್ಲೇ ದೆಹಲಿಗೆ ತೆರಳುವ ಸಾಧ್ಯತೆ ಇದೆ. ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಪಕ್ಷದ ಅಂತರಿಕ ಸಂಘರ್ಷಗಳ ಕುರಿತಾಗಿ ಅಲ್ಲಿಯೇ ಅಂತಿಮ ತೀರ್ಮಾನವಾಗಬಹುದು ಎಂಬ ನಿರೀಕ್ಷೆಯಿದೆ.
ಮೊಗಸಾಲೆಯಲ್ಲಿ ಸಭೆ ನಡೆಸಿದ ಅಸಮಾಧಾನ ಗೂಢಚರ್ಚೆ
ಈ ನಡುವೆ, ವಿಧಾನಸೌಧದ ಮೊಗಸಾಲೆಯಲ್ಲಿ ರಾಜ್ಯ ಬಿಜೆಪಿ ಭಿನ್ನಮತೀಯ ನಾಯಕರ ಗುಂಪು ಗುಪ್ತ ಸಭೆ ನಡೆಸಿ, ಮುಂದಿನ ಹಾದಿ ಬಗ್ಗೆ ಚರ್ಚೆ ನಡೆಸಿರುವ ಮಾಹಿತಿ ಲಭ್ಯವಾಗಿದೆ. ರಾಜ್ಯ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಪ್ರಮುಖ ಬೆಳವಣಿಗೆಗಳು ನಡೆಯಬಹುದಾಗಿದೆ.