ಬೆಳಗಾವಿ: ಬೆಳಗಾವಿಯ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಮತ್ತೊಮ್ಮೆ ರಾಜಕೀಯ ಬಾಂಬ್ ಸಿಡಿಸಿದ್ದಾರೆ. ಮಾಜಿ ಸಚಿವ ಬಿ. ರಾಮುಲು ಅವರು ಬಿಹಾರ ಚುನಾವಣೆಗೆ 300 ಕೋಟಿ ರೂಪಾಯಿ ನೀಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, “ಅವರಿಗೆ ಯಾರಿಂದ ಹೇಗೆ ಹಣ ಹೋಗುತ್ತದೆ ಎಂಬುದು ಚೆನ್ನಾಗಿ ಗೊತ್ತಿರುತ್ತದೆ. ಕಾಂಗ್ರೆಸ್‌ನಲ್ಲಿ ಇದು ಸಹಜ ವ್ಯವಸ್ಥೆಯಾಗಿ ಮಾಡಿಕೊಂಡಿದ್ದಾರೆ. ಕರ್ನಾಟಕದಿಂದಲೇ ಉತ್ಪನ್ನ ಬರುವಂತೆ ಏರ್ಪಾಟು ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಪಪ್ಪಿ ಎಂಬುವವರು ಸಚಿವ ಸ್ಥಾನಕ್ಕಾಗಿ 500 ಕೋಟಿ ರೂಪಾಯಿ ಕೊಡುತ್ತೇನೆ ಎಂದಿದ್ದರು ಎಂದು ಹೇಳಿರುವ ಯತ್ನಾಳ್, “ಆ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದಾಗ ಏನೆಲ್ಲಾ ಸಿಕ್ಕಿದೆ ನೀವೇ ನೋಡಿದ್ದೀರಿ” ಎಂದು ತಿಳಿಸಿದ್ದಾರೆ. ತಾವು ಯಾರ ಸಂಪರ್ಕಕ್ಕೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, “ಚುನಾವಣೆ ಬಂದಾಗಲಷ್ಟೇ ಅವರಿಗೆ ಅಗತ್ಯ ಬೀಳುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ.
ಗೋವಾ ಪರಿವರ್ತನೆ, ಜೆಸಿಬಿ ರೆಡಿ!
ನಾಳೆ ಗೋವಾಕ್ಕೆ ತೆರಳುತ್ತಿರುವ ಯತ್ನಾಳ್, “ಅಲ್ಲಿ ಪರಿವರ್ತನೆ ನಡೆಯುತ್ತಿದೆ. ಹೈಕಮಾಂಡ್ ಕರೆಯದಿದ್ದರೆ ಜೆಸಿಬಿ ರೆಡಿಯಾಗಿ ಇಟ್ಟುಕೊಂಡಿದ್ದೇನೆ. 2028ಕ್ಕೆ ಜೆಸಿಬಿ ಮೂಲಕ ಮುಖ್ಯಮಂತ್ರಿ ಆಗ್ತೇನಿ” ಎಂದು ಘೋಷಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗಳಿಂದ ಸಾಕಷ್ಟು ಜನ ತಮ್ಮೊಂದಿಗೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೊಸ ಪಕ್ಷ ಕಟ್ಟುವ ಯೋಜನೆ
“ಪಕ್ಷ ಕಟ್ಟಿದ್ರೆ ಯತ್ನಾಳ್ ಯಶಸ್ವಿಯಾಗಬಹುದು. ರಾಜ್ಯದಲ್ಲಿ ವಿಜಯೇಂದ್ರ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷರಾದರೆ ಜೆಸಿಬಿ ಆ್ಯಕ್ಟೀವ್ ಆಗುತ್ತದೆ. ಆ ದಿನವೇ ಹೊಸ ಪಕ್ಷ ರೆಡಿಯಾಗುತ್ತದೆ” ಎಂದು ಹೇಳಿದ್ದಾರೆ. ಜೆಸಿಬಿ ಪಕ್ಷದ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿರುವ ಅವರು, “ಜೆಸಿಬಿ ಅಂದ್ರೆ ಜೆ – ಜೆಡಿಎಸ್, ಬಿ – ಬಿಜೆಪಿ, ಸಿ – ಕಾಂಗ್ರೆಸ್. ಅಲ್ಲಿನ ಅತೃಪ್ತರನ್ನು ಕರೆತಂದು ಟಿಕೆಟ್ ನೀಡಿ ಗೆಲ್ಲಿಸುತ್ತೇನೆ” ಎಂದು ಘೋಷಿಸಿದ್ದಾರೆ.
ಯಾವ ಕಾರಣಕ್ಕೂ ವಿಜಯೇಂದ್ರ ನಾಯಕತ್ವ ಒಪ್ಪುವುದಿಲ್ಲ ಎಂದು ಹೇಳಿರುವ ಯತ್ನಾಳ್, “ನಮ್ಮದೇ ಪಕ್ಷ ಸ್ಟ್ರಾಂಗ್ ಆಗುತ್ತಿದೆ. ದೆಹಲಿಯಲ್ಲಿ ಆಪ್ ಮಾದರಿಯಲ್ಲಿ ನಾನು ಬರುತ್ತೇನಿ” ಎಂದು ಸವಾಲು ಹಾಕಿದ್ದಾರೆ.
ಯತ್ನಾಳ್ ಅವರ ಈ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಸೃಷ್ಟಿಸಿದ್ದು, ಮುಂದಿನ ದಿನಗಳಲ್ಲಿ ಹೊಸ ಬೆಳವಣಿಗೆಗಳು ನಿರೀಕ್ಷಿಸಲಾಗಿದೆ.












