ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ನಗರದ ಯೋಜನಾ ಪ್ರಾಧಿಕಾರದ ಜವಾಬ್ದಾರಿ ಮತ್ತು ಟಿಡಿಆರ್ ನೀಡುವ ಅಧಿಕಾರವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಹಸ್ತಾಂತರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಜಿಬಿಎ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಾಧಿಕಾರದ ಮೊದಲ ಸಭೆಯಲ್ಲಿ ಮಾತನಾಡಿದ ಡಿಸಿಎಂ, ಜಿಬಿಎ ಜಾರಿಗೆ ತಂದಿರುವ ಸಮಿತಿಯ ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದರು. ಸಭೆಯಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್, ಜಮೀರ್ ಅಹ್ಮದ್ ಖಾನ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರೀಸ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಎಂ. ಕೃಷ್ಣಪ್ಪ, ಎ.ಸಿ. ಶ್ರೀನಿವಾಸ್, ರಿಜ್ವಾನ್ ಅರ್ಷದ್, ಬಿ. ಶಿವಣ್ಣ, ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮತ್ತು ಐದು ಪಾಲಿಕೆಗಳ ಆಯುಕ್ತರು ಉಪಸ್ಥಿತರಿದ್ದರು.
ಜಿಬಿಎಗೆ ಅಭಿನಂದನೆ, ಪಾಲಿಕೆ ಕಟ್ಟಡಗಳಿಗೆ ಏಕರೂಪದ ವಿನ್ಯಾಸ
“ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಬಿಎ ಸಮಿತಿಯ ಮೊದಲ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಜಿಬಿಎ ಜಾರಿಗೆ ಶ್ರಮಿಸಿದ ಬಿ.ಎಸ್. ಪಾಟೀಲ್, ರವಿಚಂದ್ರನ್, ಸಿದ್ದಯ್ಯ ಸಮಿತಿ ಮತ್ತು ಅಧಿಕಾರಿಗಳಾದ ತುಷಾರ್ ಗಿರಿನಾಥ್, ಮಹೇಶ್ವರ್ ರಾವ್ ತಂಡಕ್ಕೆ ಅಭಿನಂದನೆ ಸಲ್ಲಿಸಲಾಗಿದೆ. ರಿಜ್ವಾನ್ ಅರ್ಷದ್ ನೇತೃತ್ವದ ಸಮಿತಿಯು ಜನರ ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿದ್ದಕ್ಕೆ ಧನ್ಯವಾದ ಅರ್ಪಿಸಲಾಗಿದೆ” ಎಂದು ಶಿವಕುಮಾರ್ ಹೇಳಿದರು.
ಐದು ಪಾಲಿಕೆಗಳ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ಬಿಬಿಎಂಪಿ ಮುಖ್ಯ ಕಚೇರಿಯ ಕಟ್ಟಡವು ಜಿಬಿಎ ಕಚೇರಿಯಾಗಲಿದೆ. ನೂತನ ಕಟ್ಟಡಗಳು ನಿರ್ಮಾಣವಾಗುವವರೆಗೆ ಇದೇ ಕಟ್ಟಡದಲ್ಲಿ ಸಭೆಗಳಿಗೆ ವ್ಯವಸ್ಥೆ ಮಾಡಲಾಗುವುದು. ಎಲ್ಲಾ ಪಾಲಿಕೆ ಕಟ್ಟಡಗಳ ವಿನ್ಯಾಸ ಏಕರೂಪವಾಗಿರಲಿದೆ ಎಂದರು.
ಪಾಲಿಕೆ ಆಯುಕ್ತರು, ಸ್ಥಾಯಿ ಸಮಿತಿ, ಮೇಯರ್‌ಗೆ ವೆಚ್ಚದ ಮಿತಿ ಏರಿಕೆ
ಪಾಲಿಕೆ ಆಯುಕ್ತರ ವೆಚ್ಚದ ಮಿತಿಯನ್ನು 1 ಕೋಟಿಯಿಂದ 3 ಕೋಟಿ ರೂ.ಗೆ, ಸ್ಥಾಯಿ ಸಮಿತಿಯ ಮಿತಿಯನ್ನು 3 ಕೋಟಿಯಿಂದ 5 ಕೋಟಿಗೆ, ಮೇಯರ್‌ನ ವೆಚ್ಚದ ಮಿತಿಯನ್ನು 5 ಕೋಟಿಯಿಂದ 10 ಕೋಟಿಗೆ ಏರಿಸಲಾಗಿದೆ. ಇದರಿಂದ ಐದು ಪಾಲಿಕೆಗಳಿಗೆ ಒಟ್ಟು 15 ಕೋಟಿ, 25 ಕೋಟಿ ಮತ್ತು 50 ಕೋಟಿ ರೂ. ಅನುದಾನ ನೀಡಲಾಗುವುದು. ಇದು ಐತಿಹಾಸಿಕ ತೀರ್ಮಾನ ಎಂದು ಡಿಸಿಎಂ ತಿಳಿಸಿದರು.
ಬೆಂಗಳೂರಿಗೆ ಹೊಸ ರೂಪ ನೀಡಲು ಜಿಬಿಎ
“ಬೆಂಗಳೂರಿಗೆ ಹೊಸ ರೂಪ ನೀಡಲು ಎಲ್ಲಾ ಪಕ್ಷಗಳ ಶಾಸಕರು ಮತ್ತು ಜನರ ಅಭಿಪ್ರಾಯ ಸಂಗ್ರಹಿಸಿ ಜಿಬಿಎ ಕಾಯ್ದೆಯನ್ನು ರೂಪಿಸಲಾಗಿದೆ. ಏಪ್ರಿಲ್ 23ರಂದು ರಾಜ್ಯಪಾಲರು ಕಾಯ್ದೆಗೆ ಒಪ್ಪಿಗೆ ನೀಡಿದ್ದು, ಮೇ 15ರಂದು ಜಾರಿಗೆ ತರಲಾಯಿತು. ಜುಲೈ 25ರಂದು ಐದು ಪಾಲಿಕೆಗಳ ರಚನೆಗೆ ಅಧಿಸೂಚನೆ ಹೊರಡಿಸಲಾಯಿತು. ಸೆಪ್ಟೆಂಬರ್ 2ರಂದು ಪಾಲಿಕೆಗಳ ರಚನೆಗೆ ಆದೇಶ ಹೊರಡಿಸಿ, ಆಯುಕ್ತರನ್ನು ನೇಮಿಸಲಾಗಿದೆ” ಎಂದು ಶಿವಕುಮಾರ್ ವಿವರಿಸಿದರು.
ಬೆಂಗಳೂರು ಕೇಂದ್ರ (50 ವಾರ್ಡ್), ದಕ್ಷಿಣ (72), ಪೂರ್ವ (63), ಪಶ್ಚಿಮ (111), ಉತ್ತರ (72) ಸೇರಿ ಒಟ್ಟು 368 ವಾರ್ಡ್‌ಗಳನ್ನು ರಚಿಸಲಾಗಿದೆ. ಈ ಹಿಂದೆ 198 ವಾರ್ಡ್‌ಗಳಿದ್ದವು. ವಾರ್ಡ್ ವಿಂಗಡಣೆಗೆ ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿದೆ. 74ನೇ ತಿದ್ದುಪಡಿಯ ಉಲ್ಲಂಘನೆಯಾಗದಂತೆ ಈ ರಚನೆ ಮಾಡಲಾಗಿದೆ ಎಂದರು.
ಜಿಬಿಎಗೆ ಸಿಎಂ ನೇತೃತ್ವ, ಸರ್ಕಾರದ ಶ್ರೀರಕ್ಷೆ
ಪಾಲಿಕೆ ಆಡಳಿತದಲ್ಲಿ ಸರ್ಕಾರದ ಶ್ರೀರಕ್ಷೆ ಇರಬೇಕೆಂದು ಮುಖ್ಯಮಂತ್ರಿಗಳನ್ನು ಜಿಬಿಎ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬಿಡಿಎ, ಬಿಎಂಆರ್‌ಡಿಎ, ಬೆಸ್ಕಾಂ, ಬಿಡಬ್ಲ್ಯೂಎಸ್‌ಎಸ್‌ಬಿ, ಪೊಲೀಸ್ ಆಯುಕ್ತರು, ಸಂಚಾರಿ ಪೊಲೀಸ್ ಕಮಿಷನರ್ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಸಮಿತಿಯಲ್ಲಿ ಸೇರಿಸಲು ನಿರ್ಣಯಿಸಲಾಗಿದೆ.
ಜಿಬಿಎ ವಿರೋಧಿಸುವವರು ಚುನಾವಣೆ ಬಹಿಷ್ಕರಿಸಲಿ: ಡಿಸಿಎಂ ಸವಾಲು
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಟೀಕೆಗೆ ತಿರುಗೇಟು ನೀಡಿದ ಶಿವಕುಮಾರ್, “ಮೊದಲ ಸಭೆಯಲ್ಲಿ ಅಜೆಂಡಾ ಇರುವುದಿಲ್ಲ. ಜಿಬಿಎಯ ದಿಕ್ಕನ್ನು ಈ ಸಭೆಯಲ್ಲಿ ನಿರ್ಧರಿಸಲಾಗುವುದು. ಬಿಜೆಪಿ ನಾಯಕರು ಸಭೆಗೆ ಗೈರಾಗುವ ಮೂಲಕ ಬೆಂಗಳೂರಿನ ಜನರಿಗೆ ದ್ರೋಹ ಬಗೆದಿದ್ದಾರೆ. ಜಿಬಿಎ ರದ್ದುಗೊಳಿಸುವುದು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದ ತೀರ್ಮಾನಗಳನ್ನು ಯಾರೂ ಬದಲಾಯಿಸಲಾಗಿಲ್ಲ. ಜಿಬಿಎ ವಿರುದ್ಧ ಪ್ರತಿಭಟಿಸುವವರು ಪಾಲಿಕೆ ಚುನಾವಣೆಯನ್ನು ಬಹಿಷ್ಕರಿಸಲಿ” ಎಂದು ಸವಾಲು ಹಾಕಿದರು.
ಪ್ರಶ್ನೋತ್ತರ
ಸದಸ್ಯರ ಗೈರು: ಸಚಿವ ಕೃಷ್ಣ ಭೈರೇಗೌಡರು ಹಾಸನಾಂಬ ದೇವರ ದರ್ಶನ ಕಾರ್ಯಕ್ರಮದಲ್ಲಿ, ಬೈರತಿ ಸುರೇಶ್ ಶಸ್ತ್ರಚಿಕಿತ್ಸೆಯಿಂದ, ಕೆಲವರು ಅನಿವಾರ್ಯ ಕಾರಣಗಳಿಂದ ಗೈರಾಗಿದ್ದಾರೆ. ವಿರೋಧ ಪಕ್ಷದವರು ಎಲ್ಲರೂ ಗೈರಾಗಿದ್ದಾರೆ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ವಾರ್ಡ್ ಮರುವಿಂಗಡಣೆ: ಇದು ಸಮಿತಿಯ ಜವಾಬ್ದಾರಿಯಾಗಿದ್ದು, ಸರ್ಕಾರದ ಹಸ್ತಕ್ಷೇಪವಿಲ್ಲ ಎಂದರು.
ಬಿಜೆಪಿ ಆರೋಪ: “ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂಬ ಆರೋಪಕ್ಕೆ, ನಾಯಕರನ್ನು ಹುಟ್ಟುಹಾಕುವುದು ನಮ್ಮ ಗುರಿ. ಮುಂದಿನ ಚುನಾವಣೆಯಲ್ಲಿ 50% ಮಹಿಳಾ ಜನಪ್ರತಿನಿಧಿಗಳಿರಲಿದ್ದಾರೆ” ಎಂದರು.
ಓಸಿ, ಸಿಸಿ ವಿನಾಯಿತಿ: 30×40 ವರೆಗಿನ ಕಟ್ಟಡಗಳಿಗೆ ವಿನಾಯಿತಿ ನೀಡಲಾಗಿದೆ. ಉಳಿದ ತೀರ್ಮಾನಕ್ಕೆ ಕಾನೂನು ತಂಡದ ಸಲಹೆಯೊಂದಿಗೆ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.












