ಬಿಬಿಎಂಪಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಅಧ್ಯಕ್ಷಶ್ರೀ ಜಿ.ಕೃಷ್ಣಪ್ಪ ರವರು ಬಿಬಿಎಂಪಿ ವ್ಯಾಪ್ತಿಯ 28 ವಿಧಾನ ಸಭಾ ಕ್ಷೇತ್ರಗಳಿಗೆ ಪರಿಶೀಲನಾ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದುವರೆಗೂ 10 ವಿಧಾನ ಸಭಾ ಕ್ಷೇತ್ರಗಳ ಕಛೇರಿ ಪರಿವೀಕ್ಷಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಅದರಂತೆ ಇಂದು ದಾಸರಹಳ್ಳಿ ಹಾಗೂ ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದ ಕಛೇರಿಗಳಿಗೆ ಪರಿವೀಕ್ಷಣೆ ಕಾರ್ಯಕ್ರಮವನ್ನು ಕೈಗೊಂಡು, ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಮಾತನಾಡಿ, ಪ್ರತಿ ವಿಧಾನ ಸಭಾ ಕ್ಷೇತ್ರದ ವಾರ್ಡ್ ವಾರು ಗ್ಯಾರಂಟಿ ಮನೆ-ಮನೆ ಭೇಟಿ ಕಾರ್ಯಕ್ರಮವನ್ನು ಕಡ್ಡಾಯವಾಗಿ ಹಮ್ಮಿಕೊಳ್ಳುವಂತೆ ಸಮಿತಿಯ ಸದಸ್ಯರುಗಳಿಗೆ ತಿಳಿಸಿದರು.

ಪ್ರತಿ ತಿಂಗಳೂ ಕನಿಷ್ಠ ಒಂದು ಗರಿಷ್ಠ ಎರಡು ಸಭೆಗಳನ್ನು ನಡೆಸಿ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬಂದ ಅಹವಾಲುಗಳನ್ನು ತಳಮಟ್ಟದಲೇ ಬಗೆಹರಿಸಿ, ಎಲ್ಲಾ ಅರ್ಹ ಫಲಾನುಭವಿಗಳಿಗೆ ಮಹತ್ವದ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವಂತೆ ಸದಸ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ.ಸಿ. ವೆಂಕಟೇಶ್ ರವರು (ದಾಸರಹಳ್ಳಿ), ಶ್ರೀ ಆರ್.ಎಂ. ನಾಗೇಶ್ ರವರು (ರಾಜರಾಜೇಶ್ವರಿನಗರ), ಸಮಿತಿಯ ಸದಸ್ಯ ಕಾರ್ಯದರ್ಶಿಗಳು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.