ಬೆಂಗಳೂರು: ಜ. 29:
ಬಿಬಿಎಂಪಿ ವ್ಯಾಪ್ತಿಯಲ್ಲಿ 30ನೇ ಜನವರಿ 2025 ರಿಂದ 13ನೇ ಫೆಬ್ರವರಿ 2025 ರವರೆಗೆ ಕುಷ್ಠರೋಗದ ಕುರಿತು ಜಾಗೃತಿ ಆಂದೋಲನ ನಡೆಸಲಾಗುವುದೆಂದು ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಸಿರಾಜುದ್ದೀನ್ ಮದನಿ ರವರು ತಿಳಿಸಿದ್ದಾರೆ.
2016-17ರ ಸಾಲಿನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮವು ಅನುಷ್ಠಾನಗೊಂಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ 144 ಆರೋಗ್ಯ ಕೇಂದ್ರಗಳು, 5 ಸಾರ್ವಜನಿಕ ಆಸ್ಪತ್ರೆಗಳು, 8 ವ್ಯದ್ಯಕೀಯ ಕಾಲೇಜು/ಆಸ್ಪತ್ರೆಗಳು, 2 ಸ್ವಯಂಸೇವಾ ಸಂಸ್ಥೆಗಳು ಸದರಿ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
2024-25ರ ಅವಧಿಯ ದಿನಾಂಕ 01.4.2024ರ ಪ್ರಾರಂಭದಲ್ಲಿ 319 ಎಂ.ಬಿ(Multi bacillari) ಮತ್ತು 17 ಪಿ.ಬಿ(Pauci bacillari) ಒಟ್ಟು 336 ಕುಷ್ಠರೋಗ ಪ್ರಕರಣಗಳು ದಾಖಲಾಗಿ ಬಹು ಔಷಧ ಚಿಕಿತ್ಸೆಗೆ ಒಳಪಟ್ಟಿರುತ್ತವೆ. ಪಿ.ಬಿ. ಪ್ರಕರಣವು 6 ತಿಂಗಳು ಮತ್ತು ಎಂ.ಬಿ. ಪ್ರಕರಣವು 12 ತಿಂಗಳು ಚಿಕಿತ್ಸೆಗೆ ಒಳಪಟ್ಟಲ್ಲಿ ಗುಣ ಮುಖವಾಗುತ್ತದೆ.
01.04.2019 ರಿಂದ 31.12.2024 ರವರೆಗೆ 341 ಪ್ರಕರಣಗಳು ದಾಖಲಾಗಿದ್ದು, ಎಲ್ಲವೂ ಬಹು ಔಷಧ ಚಿಕಿತ್ಸೆಗೆ ಒಳಪಟ್ಟಿವೆ. ಮೈಕೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವು ಶರೀರ ಪ್ರವೇಶಿಸಿದಾಗ 0-3 ವರ್ಷದೊಳಗೆ ಸ್ಪರ್ಶ ಜ್ಞಾನ ಕಳೆದು ಕೊಂಡ ಮಚ್ಚೆ/ನರಗಳ ಒಳಪಡುವಿಕೆಯಿಂದ ಕೈಕಾಲು ಜೋಮು ಉಂಟಾಗುವುದೆ ಇದರ ಮುಖ್ಯ ಲಕ್ಷಣ.
ಕುಷ್ಠರೋಗ ನಿರ್ಮೂಲನಕ್ಕೆ ಮುಂದಾಗಿರುವ ಪಾಲಿಕೆಯ ಆರೋಗ್ಯ ಇಲಾಖೆ ಜನವರಿ 30 ರಿಂದ ಫೆಬ್ರವರಿ 13ರ ವರೆಗೆ ‘ಒಟ್ಟಾಗಿ ನಾವು ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸೋಣ, ತಪ್ಪು ಕಲ್ಪನೆಗಳನ್ನು ಹೋಗಲಾಡಿಸೋಣ ಮತ್ತು ಕುಷಠರೋಗದಿಂದ ಯಾರೂ ಬಾಧಿತರಾಗದಂತೆ ನೋಡಿಕೊಳ್ಳೋಣ’ ಶೀರ್ಷಿಕೆಯಡಿ ಜಾಗೃತಿ ಆಂದೋಲನ ಹಮ್ಮಿಕೊಂಡಿದೆ. ಈ ಸಂದರ್ಭ ಎಲ್ಲಾ ವೈದ್ಯರು ಹಾಗೂ ಪಾಲಿಕೆಯ ಸಿಬ್ಬಂದಿ ಕುಷ್ಠರೋಗ ಮುಕ್ತ ಪಾಲಿಕೆ ನಿರ್ಮಾಣದ ಪ್ರತಿಜ್ಙೆ ಸ್ವೀಕರಿಸಲಿದ್ದಾರೆ.
ಆಂದೋಲನದ ಮೂಲಕ ಜನರನ್ನು ಸಂಪರ್ಕಿಸಿ, ರೋಗದ ಲಕ್ಷಣ ಹಾಗೂ ಚಿಕಿತ್ಸೆ ಕುರಿತು ಅರಿವು ಮೂಡಿಸಲಾಗುವುದು. ಇದೇ ವೇಳೆ ಕುಷ್ಠರೋಗ ಪತ್ತೆ ಕಾರ್ಯ ಸಹ ನಡೆಸಲಾಗುವುದು.
ಹೆಚ್ಚಿನ ಸಂಪರ್ಕಕ್ಕಾಗಿ:
ಡಾ. ಗಿರೀಶ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ, ಬಿಬಿಎಂಪಿ.
ಮೊ.ಸಂ: 9480683352