ಅರಾರಿಯಾ (ಬಿಹಾರ): ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ ‘ವೋಟ್ ಅಧಿಕಾರ ಯಾತ್ರೆ’ ದೇಶದ ರಾಜಕೀಯದಲ್ಲಿ ಒಂದು ದೊಡ್ಡ ಬದಲಾವಣೆಯನ್ನು ತರಲಿದೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಿಹಾರದ ಅರಾರಿಯಾದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಹುಲ್ ಗಾಂಧಿ ಅವರು ಕರ್ನಾಟಕದಿಂದ ಬಿಹಾರದವರೆಗೆ ಎತ್ತಿರುವ ಧ್ವನಿಯ ಬಗ್ಗೆ ಇಡೀ ದೇಶವೇ ಚರ್ಚಿಸುತ್ತಿದೆ. ಈ ಹೋರಾಟ ತಮಗಾಗಿ ಅಲ್ಲ, ಸಂವಿಧಾನದಿಂದ ಜನರಿಗೆ ಸಿಕ್ಕಿರುವ ಹಕ್ಕುಗಳ ರಕ್ಷಣೆಗಾಗಿ” ಎಂದು ತಿಳಿಸಿದರು.
“ಕರ್ನಾಟಕದಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತು. ಮತದಾರರಿಗೆ ತಮ್ಮ ಹಕ್ಕನ್ನು ಚಲಾಯಿಸಲು ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿದೆ, ಇದರ ಬಗ್ಗೆ ನನಗೆ ಹೆಮ್ಮೆ ಇದೆ. ಬಿಹಾರದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಅವರು ಮಹಾಘಟಬಂಧನಕ್ಕೆ ಬೆಂಬಲ ನೀಡುತ್ತಿದ್ದಾರೆ. ಇಲ್ಲಿನ ಯುವಕರು ಕೂಡ ಬೀದಿಗಿಳಿದು ಈ ಯಾತ್ರೆಗೆ ದೊಡ್ಡ ಮಟ್ಟದಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ” ಎಂದು ಶಿವಕುಮಾರ್ ಹೇಳಿದರು.
ಮಹಾಘಟಬಂಧನದ ಭರವಸೆಗಳ ಬಗ್ಗೆ ಮಾತನಾಡಿದ ಅವರು, “ನಾವು ನೀಡಿರುವ ಗ್ಯಾರಂಟಿಗಳು ಜನರಿಗೆ ನೆರವಾಗಲಿವೆ. ನಾವು ಕೊಟ್ಟ ಮಾತನ್ನು ಎಲ್ಲಾ ರಾಜ್ಯಗಳಲ್ಲಿ ಈಡೇರಿಸಿದ್ದೇವೆ. ಕಳೆದ ಬಾರಿ ಮಹಾಘಟಬಂಧನ ಅಲ್ಪ ಅಂತರದಿಂದ ಸೋತಿತ್ತು. ಆದರೆ ಈ ಬಾರಿ ಗೆಲುವು ನಮ್ಮದೇ ಎಂಬ ವಿಶ್ವಾಸವಿದೆ. ಬಿಹಾರದಲ್ಲಿ ಇಂಡಿಯಾ ಒಕ್ಕೂಟದ ಸರ್ಕಾರ ರಚನೆಯಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಯ ರಾಜಕೀಯ ಆರೋಪ
ಧರ್ಮಸ್ಥಳ ವಿಷಯಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, “ಈ ವಿಷಯದ ಬಗ್ಗೆ ನಾನು ಈಗಾಗಲೇ ಸಾಕಷ್ಟು ಮಾತನಾಡಿದ್ದೇನೆ. ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಅವರು ತಮ್ಮ ವೈಫಲ್ಯಗಳನ್ನು ನಮ್ಮ ಮೇಲೆ ಹೊರಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯಲ್ಲಿ ಎರಡು ಬಣಗಳಿವೆ, ಇದರಿಂದ ಈ ರೀತಿಯ ರಾಜಕೀಯ ಆಗುತ್ತಿದೆ. ನಾವು ಸತ್ಯವನ್ನು ಜನರ ಮುಂದಿಡುತ್ತಿದ್ದೇವೆ” ಎಂದು ತಿರುಗೇಟು ನೀಡಿದರು.