ಬೆಂಗಳೂರಿನ ಚಿಕ್ಕ ಬೆಟ್ಟದಹಳ್ಳಿಯ ಬಾಲಾಜಿ ಲೇಔಟ್‌ನಲ್ಲಿ ನಡೆದ ಒಂದು ಆಘಾತಕಾರಿ ಘಟನೆಯಲ್ಲಿ, ನೇಪಾಳಿ ಮೂಲದ ದಂಪತಿಯಿಂದ ತಮ್ಮದೇ ಹೆಣ್ಣು ಮಗುವಿನ ಮೇಲೆ ಕ್ರೂರ ಹಲ್ಲೆ ನಡೆದಿದೆ. ತಂದೆ ಲೋಕೇಶ್ ತನ್ನ ಮಗುವಿನ ಮೇಲೆ ಹಿಗ್ಗಾಮುಗ್ಗಾ ಹೊಡೆದಿದ್ದು, ಮಗುವಿನ ಕೈ, ಕಾಲು ಮತ್ತು ದೇಹದಾದ್ಯಂತ ಬಾಸುಂಡೆ ಗಾಯಗಳಾಗಿವೆ. ಹಲ್ಲೆಯ ಪರಿಣಾಮದಿಂದ ಮಗುವಿನ ದೇಹದ ಹಲವು ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದೆ.
ಮಗುವು ತನ್ನ ಹೇಳಿದ ಮಾತನ್ನು ಕೇಳದ ಕಾರಣಕ್ಕೆ ತಂದೆ ಲೋಕೇಶ್ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಆಶ್ಚರ್ಯಕರವಾಗಿ, ತಾಯಿ ಅಮೃತ ಈ ಹಲ್ಲೆಯನ್ನು ತಡೆಯದೆ, ಮಗುವಿನ ಮುಂದೆಯೇ ಈ ಕೃತ್ಯ ನಡೆಯಲು ಬಿಟ್ಟಿದ್ದಾಳೆ.
ಮಗುವಿನ ಅಳುವಿನ ರೋಧನೆಯನ್ನು ಕೇಳಿ ಎಚ್ಚೆತ್ತ ಸ್ಥಳೀಯರು, ತಕ್ಷಣವೇ ವಿದ್ಯಾರಣ್ಯಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾರಣ್ಯಪುರ ಹೊಯ್ಸಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ದೌಡಾಯಿಸಿ, ಮಗುವನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಆರೋಪಿ ತಂದೆ ಲೋಕೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲೋಕೇಶ್ ಬೆಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ತಾಯಿ ಅಮೃತ ಮನೆಕೆಲಸ ಮಾಡಿಕೊಂಡಿದ್ದಾಳೆ. ಈ ದಂಪತಿ ಬಾಲಾಜಿ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಹಲ್ಲೆಯ ಬಳಿಕ ಲೋಕೇಶ್ ಕೆಲಸಕ್ಕೆ ತೆರಳಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಗ್ಗೆ ತಿಳಿದ ತಾಯಿ ಅಮೃತ, ಸ್ಥಳೀಯರೊಂದಿಗೆ ಜಗಳಕ್ಕಿಳಿದಿದ್ದಾಳೆ. “ಯಾರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದು?” ಎಂದು ಗಲಾಟೆ ಮಾಡಿದ್ದಾಳೆ.
ತದನಂತರ, ವಿದ್ಯಾರಣ್ಯಪುರ ಪೊಲೀಸರು ಲೋಕೇಶ್‌ನನ್ನು ವಶಕ್ಕೆ ಪಡೆದು, ಯಲಹಂಕ ನ್ಯೂ ಟೌನ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಲೋಕೇಶ್ ಪೊಲೀಸರ ಮುಂದೆಯೇ ಸ್ಥಳೀಯರಿಗೆ ಧಿಕ್ಕಾರದ ಮಾತನಾಡಿದ್ದಾನೆ. “ನನ್ನ ಮಗಳು, ನಾನು ಹೊಡೆಯುತ್ತೇನೆ, ನೀವು ಯಾರು ಕೇಳಲು?” ಎಂದು ಅವಾಜ್ ಹಾಕಿದ್ದಾನೆ. ಆದರೆ, ಪೊಲೀಸರು ಈ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವಂತೆ ಸಮಾಜಕ್ಕೆ ಕರೆ ನೀಡಲಾಗಿದೆ.