ಬೆಂಗಳೂರು: ಮುಸ್ಲಿಂ ಬಾಂಧವರ ಪ್ರಮುಖ ಹಬ್ಬಗಳಲ್ಲಿ ಒಂದಾದ ಈದ್-ಮಿಲಾದ್‌ನ ಆಚರಣೆಗೆ ಬೆಂಗಳೂರು ಸಜ್ಜಾಗಿದೆ. ಪ್ರವಾದಿ ಮಹಮ್ಮದ್ ಅವರ ಜನ್ಮದಿನವನ್ನು ಸ್ಮರಿಸುವ ಈದ್-ಎ-ಮಿಲಾದ್ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ನಗರದ ಅರಮನೆ ಮೈದಾನದಲ್ಲಿ ಶನಿವಾರ ಬೃಹತ್ ಧಾರ್ಮಿಕ ಸಮಾವೇಶ ನಡೆಯಲಿದೆ.
ಪ್ರತಿವರ್ಷ ನಗರದ ಮೂರ್ನಾಲ್ಕು ಕಡೆಗಳಲ್ಲಿ ನಡೆಯುತ್ತಿದ್ದ ಈ ಸಮಾವೇಶವು ಈ ಬಾರಿ ಅರಮನೆ ಮೈದಾನದಲ್ಲಿ ಒಂದೇ ಕಡೆ ಭವ್ಯವಾಗಿ ಆಯೋಜನೆಗೊಂಡಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳಿಂದ ಮುಸ್ಲಿಂ ಧರ್ಮಗುರುಗಳು ಭಾಗವಹಿಸುವ ಸಾಧ್ಯತೆ ಇದ್ದು, ಸಾವಿರಾರು ಮುಸ್ಲಿಂ ಬಾಂಧವರು ಒಟ್ಟುಗೂಡಿ ಪ್ರಾರ್ಥನೆ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಲಿದ್ದಾರೆ.
ಹಬ್ಬದ ಸಂಭ್ರಮಕ್ಕಾಗಿ ನಗರದಾದ್ಯಂತ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಮಾರುಕಟ್ಟೆಗಳಲ್ಲಿ ಹಣ್ಣುಗಳು, ಡ್ರೈ ಫ್ರೂಟ್ಸ್ ಮತ್ತು ಇತರ ಸಾಮಗ್ರಿಗಳ ಖರೀದಿಯ ಜೋರಾಗಿದೆ. ಶನಿವಾರ ನಗರದ ಪ್ರಮುಖ ಮಸೀದಿಗಳಲ್ಲಿ ವಿಶೇಷ ನಮಾಜ್ ಮತ್ತು ಪ್ರಾರ್ಥನೆಗಳು ಜರುಗಲಿದ್ದು, ಭಕ್ತರು ಒಟ್ಟಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಈದ್-ಮಿಲಾದ್‌ನ ಈ ಧಾರ್ಮಿಕ ಸಮಾವೇಶವು ಸಾಮರಸ್ಯ, ಶಾಂತಿ ಮತ್ತು ಒಗ್ಗಟ್ಟಿನ ಸಂದೇಶವನ್ನು ಸಾರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.