ಬೆಂಗಳೂರು: ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ದೃಷ್ಟಿಕೋನಕ್ಕೆ ಸಂನಾದವಾಗಿ, ಎಸ್.ಎ.ಪಿ ಲ್ಯಾಬ್ಸ್ ಇಂಡಿಯಾ ಕರ್ನಾಟಕದ ಬೆಂಗಳೂರಿನ ದೇವನಹಳ್ಳಿಯಲ್ಲಿ ತನ್ನ ಅತ್ಯಾಧುನಿಕ ಇನ್ನೊವೇಶನ್ ಪಾರ್ಕ್‌ಅನ್ನು ಉದ್ಘಾಟಿಸಿದೆ. ಈ ಕ್ಯಾಂಪಸ್ ಭಾರತದ ಡಿಜಿಟಲ್ ಭವಿಷ್ಯದಲ್ಲಿ ಎಸ್.ಎ.ಪಿಯ ನಿರಂತರ ಹೂಡಿಕೆಯನ್ನು ಗುರುತಿಸುವುದರ ಜೊತೆಗೆ, ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ, ಮಾಹಿತಿ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. “ಈ ಇನ್ನೊವೇಶನ್ ಪಾರ್ಕ್ ಭಾರತದ ಬೆಳವಣಿಗೆಯ ಕಥೆಯಲ್ಲಿ ಸಮಯೋಚಿತ ಹೂಡಿಕೆಯಾಗಿದೆ. ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ‘ವಿಕಸಿತ ಭಾರತ 2047’ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಈ ಕ್ಯಾಂಪಸ್ ಭಾರತದ ಪ್ರತಿಭೆ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಯಲ್ಲಿ ಜಾಗತಿಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ,” ಎಂದು ಅವರು ಹೇಳಿದರು.
41.07 ಎಕರೆ ವಿಶಾಲವಾದ ಈ ಕ್ಯಾಂಪಸ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಆಯಕಟ್ಟಿನ ಸ್ಥಳದಲ್ಲಿದೆ. ಇದು ಎಸ್.ಎ.ಪಿಯ ಅತ್ಯಂತ ಸುಧಾರಿತ ಮತ್ತು ಸುಸ್ಥಿರ ಸೌಲಭ್ಯವಾಗಿದ್ದು, ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಾಗ 15,000 ವೃತ್ತಿಪರರಿಗೆ ಉದ್ಯೋಗ ಒದಗಿಸಲಿದೆ. ಇದು ಭಾರತದಲ್ಲಿನ ಎಸ್.ಎ.ಪಿಯ ಅತಿದೊಡ್ಡ ಕಚೇರಿಯಾಗಲಿದ್ದು, ಉತ್ಪನ್ನ ಎಂಜಿನಿಯರಿಂಗ್, ಗ್ರಾಹಕ ಸೇವೆಗಳು ಮತ್ತು ಜಾಗತಿಕ ಎ.ಐ. ಪಾತ್ರಗಳಲ್ಲಿ ಕೊಡುಗೆ ನೀಡಲಿದೆ. ಈ ಕ್ಯಾಂಪಸ್ ಜೂಲ್‌ನ ಏಜೆಂಟ್ ಎ.ಐ. ಸಾಮರ್ಥ್ಯಗಳ ಅಭಿವೃದ್ಧಿಗೆ ಕಾರಣವಾಗಲಿದೆ, ಜೊತೆಗೆ ಗ್ರಾಹಕ ಅನುಭವ ಕೇಂದ್ರ, ಎ.ಐ. ಪ್ರಯೋಗಾಲಯಗಳು, ಸ್ಟಾರ್ಟ್-ಅಪ್ ಇನ್ಕ್ಯುಬೇಷನ್ ಹಬ್‌ಗಳು ಮತ್ತು ಹ್ಯಾಕಥಾನ್ ಸ್ಥಳಗಳನ್ನು ಒಳಗೊಂಡಿದೆ.

ಗತಿ ಶಕ್ತಿ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ
ಎಸ್.ಎ.ಪಿ ಮತ್ತು ಗತಿ ಶಕ್ತಿ ವಿಶ್ವವಿದ್ಯಾಲಯ (ಜಿ.ಎಸ್.ವಿ) ಉದ್ಘಾಟನೆಯ ಸಂದರ್ಭದಲ್ಲಿ ತಿಳುವಳಿಕೆ ಒಡಂಬಡಿಕೆಗೆ ಸಹಿ ಹಾಕಿವೆ. ಈ ಸಹಕಾರವು ಭಾರತದ ಲಾಜಿಸ್ಟಿಕ್ಸ್ ಮತ್ತು ಸಾರಿಗೆ ವಲಯವನ್ನು ಡಿಜಿಟಲ್ ಕೌಶಲ್ಯದ ವೃತ್ತಿಪರರೊಂದಿಗೆ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಈ ಒಡಂಬಡಿಕೆಯು ಉದ್ಯಮ-ಸಂಬಂಧಿತ ಕೌಶಲ್ಯ ತರಬೇತಿ, ಪಠ್ಯಕ್ರಮ ವರ್ಧನೆ, ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯ ಮೂಲಕ ರಾಷ್ಟ್ರೀಯ ಲಾಜಿಸ್ಟಿಕ್ಸ್ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಗಮನಹರಿಸಿದೆ.
ಸಚಿವ ಶ್ರೀ ಅಶ್ವಿನಿ ವೈಷ್ಣವ್, “ನಾವು ಕಂಪ್ಯೂಟಿಂಗ್ ಶಕ್ತಿಯನ್ನು ಪ್ರಜಾಪ್ರಭುತ್ವಗೊಳಿಸಲು ನಿರ್ಧರಿಸಿದ್ದೇವೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ 34,000ಕ್ಕೂ ಅಧಿಕ ಜಿ.ಪಿ.ಯುಗಳನ್ನು ಎಂಪಾನೆಲ್ ಮಾಡಿದ್ದೇವೆ, ಇದು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಲಭ್ಯವಿದೆ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಐ.ಟಿ. ಸಚಿವ ಶ್ರೀ ಪ್ರಿಯಾಂಕ್ ಖರ್ಗೆ, ಭಾರತದಲ್ಲಿನ ಜರ್ಮನಿಯ ರಾಯಭಾರಿ ಡಾ. ಫಿಲಿಪ್ ಆಕರ್ಮ್ಯಾನ್ ಮತ್ತು ಎಸ್.ಎ.ಪಿ ಲ್ಯಾಬ್ಸ್ ನೆಟ್‌ವರ್ಕ್ ಮುಖ್ಯಸ್ಥ ಕ್ಲಾಸ್ ನ್ಯೂಮನ್ ಉಪಸ್ಥಿತರಿದ್ದರು.
ಈ ಉದ್ಘಾಟನೆಯು ತಂತ್ರಜ್ಞಾನ, ಎ.ಐ., ಮತ್ತು ಡಿಜಿಟಲ್ ಲಾಜಿಸ್ಟಿಕ್ಸ್‌ನಲ್ಲಿ ಜಾಗತಿಕ ನಾಯಕನಾಗುವ ಭಾರತದ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ, ಯುವಕರು, ಉದ್ಯಮ, ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.