ನವದೆಹಲಿ: ದೆಹಲಿಯ ಘನ ತ್ಯಾಜ್ಯ ವಿಲೇವಾರಿ ಕೇಂದ್ರವು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಬೆಂಗಳೂರಿನಲ್ಲಿ ಇದೇ ಮಾದರಿಯನ್ನು ಅಳವಡಿಸುವ ಬಗ್ಗೆ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನವದೆಹಲಿ ಮುನಿಸಿಪಲ್ ಕಾರ್ಪೊರೇಷನ್ (MCD) ನಡೆಸುತ್ತಿರುವ ಕಸ ವಿಲೇವಾರಿ ಘಟಕಕ್ಕೆ ಸೋಮವಾರ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಇದುವರೆಗೆ ಪರಿಶೀಲಿಸಿದ ಕಸ ವಿಲೇವಾರಿ ಕೇಂದ್ರಗಳಲ್ಲಿ ಇದು ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಕಡಿಮೆ ಜಾಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರವು 25 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ರಾಜ್ಯದಲ್ಲಿ ಈ ಹಿಂದೆ ಪ್ರಯತ್ನಿಸಿದ 10-15 ಮೆಗಾವ್ಯಾಟ್ ವಿದ್ಯುತ್ ಘಟಕಗಳು ವಿಫಲವಾಗಿದ್ದವು. ಜೊತೆಗೆ ಇಲ್ಲಿ ಅನಿಲ ಉತ್ಪಾದನೆಯೂ ನಡೆಯುತ್ತಿದೆ,” ಎಂದು ವಿವರಿಸಿದರು.
ಜಿಂದಾಲ್ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿರುವ ಈ ಕೇಂದ್ರವನ್ನು ಶ್ಲಾಘಿಸಿದ ಡಿಸಿಎಂ, “ಇಂತಹ ಉನ್ನತ ಕೇಂದ್ರವನ್ನು ಸ್ಥಾಪಿಸಿರುವ ಜಿಂದಾಲ್ ಸಂಸ್ಥೆಗೆ ಅಭಿನಂದನೆಗಳು. ಈ ಭೇಟಿಯು ನನಗೆ ಕಲಿಕೆಯ ಅನುಭವವನ್ನು ಒದಗಿಸಿದೆ. ಬೆಂಗಳೂರಿನಲ್ಲಿ ಈ ಮಾದರಿಯನ್ನು ಅಳವಡಿಸುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುವೆ,” ಎಂದರು.
ಬೆಂಗಳೂರಿನಲ್ಲಿ ದಿನಕ್ಕೆ 6,000 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಹೊರವಲಯದ ನಾಲ್ಕು ಕಡೆಗಳಲ್ಲಿ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಈ ಪೈಕಿ ಎರಡು ಕಡೆ ಟೆಂಡರ್ ಕರೆಯಲಾಗಿದೆ. “ದೆಹಲಿಯ ಈ ಕೇಂದ್ರವು ದುರ್ವಾಸನೆ ರಹಿತವಾಗಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿ ಕಸ ವಿಲೇವಾರಿಯಿಂದ ದುರ್ವಾಸನೆಯ ಸಮಸ್ಯೆಯಿಂದಾಗಿ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಾರೆ. ಈ ಸಮಸ್ಯೆಯನ್ನು ತಪ್ಪಿಸಲು ದೆಹಲಿಯ ಮಾದರಿಯನ್ನು ಅಧಿಕಾರಿಗಳ ತಂಡದೊಂದಿಗೆ ಪರಿಶೀಲಿಸಿದ್ದೇವೆ,” ಎಂದು ಶಿವಕುಮಾರ್ ಹೇಳಿದರು.
ದೆಹಲಿಯ ರಸ್ತೆ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ನೀತಿಯನ್ನು ರೂಪಿಸಲಾಗಿದ್ದು, ಇದನ್ನೂ ಪರಿಶೀಲಿಸಲಾಗುವುದು ಎಂದ ಅವರು, ಚೆನ್ನೈನಲ್ಲಿ ಅನಿಲ ಉತ್ಪಾದನೆ ಮತ್ತು ಹೈದರಾಬಾದ್‌ನಲ್ಲಿ ಅನಿಲ ಹಾಗೂ ವಿದ್ಯುತ್ ಉತ್ಪಾದನೆಯ ಕೇಂದ್ರಗಳನ್ನು ಉಲ್ಲೇಖಿಸಿದರು.
ಹೈಕಮಾಂಡ್ ಭೇಟಿಯ ಬಗ್ಗೆ ಕೇಳಿದಾಗ, “ಈ ಬಾರಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಸಾಧ್ಯವಿಲ್ಲ. ನಾಳೆ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಭಾಗವಹಿಸಲು ನಾನು ಬೆಂಗಳೂರಿಗೆ ಮರಳುತ್ತಿದ್ದೇನೆ,” ಎಂದರು.
ರಾಜ್ಯಪಾಲರಿಗೆ ಆಹ್ವಾನ ನೀಡಿದವರ ಬಗ್ಗೆ ಪ್ರಶ್ನಿಸಿದಾಗ, “ಅದನ್ನು ರಾಜ್ಯಪಾಲರನ್ನೇ ಕೇಳಿ. ಕಾಲ್ತುಳಿತ ಪ್ರಕರಣದ ಬಗ್ಗೆ ಕುನ್ಹಾ ಆಯೋಗ ತನಿಖೆ ನಡೆಸುತ್ತಿದೆ. ಆ ತನಿಖೆಯ ಮೇಲೆ ಪ್ರಭಾವ ಬೀರದಂತೆ ಈ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.