ಬೆಂಗಳೂರು: ಬೆಂಗಳೂರಿನ ವೈಟ್‌ಫೀಲ್ಡ್‌ನ ಪ್ರಶಾಂತ್ ಲೇಔಟ್‌ನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಶುಭಾಂಶು ಶುಕ್ಲಾ (26) ಎಂಬಾತನನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಮೇ 9 ರಂದು ರಾತ್ರಿ 12:30 ಗಂಟೆ ಸುಮಾರಿಗೆ ನಡೆದ ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
ಛತ್ತೀಸ್‌ಗಢ ಮೂಲದ ಶುಭಾಂಶು ಶುಕ್ಲಾ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ವೈಟ್‌ಫೀಲ್ಡ್‌ನ ಪ್ರಶಾಂತ್ ಲೇಔಟ್‌ನ ಪಿಜಿಯೊಂದರಲ್ಲಿ ವಾಸವಾಗಿದ್ದ. ಭಾರತದ ‘ಆಪರೇಷನ್ ಸಿಂಧೂರ್’ ಯಶಸ್ಸಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ಆರೋಪಿ ತನ್ನ ಪಿಜಿಯ ಬಾಲ್ಕನಿಯಲ್ಲಿ ನಿಂತು ಪಾಕ್ ಪರ ಘೋಷಣೆ ಕೂಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ವಿವರ
ರಾತ್ರಿ 11 ಗಂಟೆ ಸುಮಾರಿಗೆ 112 ಗೆ ಬಂದ ಕರೆಯ ಆಧಾರದ ಮೇಲೆ ವೈಟ್‌ಫೀಲ್ಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎದುರುಗಡೆಯ ಪಿಜಿಯಲ್ಲಿ ವಾಸವಾಗಿದ್ದ ಕೆಲ ಯುವಕರು ಘೋಷಣೆಯನ್ನು ಕೇಳಿ ಭಯಭೀತರಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಘಟನೆಯ ಸಂದರ್ಭದಲ್ಲಿ ಆರೋಪಿಯೊಂದಿಗೆ ಮತ್ತೊಬ್ಬ ವ್ಯಕ್ತಿ ಬಾಲ್ಕನಿಯಲ್ಲಿದ್ದರೂ, ಶುಭಾಂಶು ಒಬ್ಬನೇ ಘೋಷಣೆ ಕೂಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ಪ್ರಕರಣಕ್ಕೆ ತಿರುವು
ತನಿಖೆಯಲ್ಲಿ ಆಶ್ಚರ್ಯಕರ ಸಂಗತಿಯೊಂದು ಬೆಳಕಿಗೆ ಬಂದಿದೆ. ಆರೋಪಿ ಶುಭಾಂಶು ಶುಕ್ಲಾ ಮೊದಲಿಗೆ ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿದ್ದಾನೆ. ಆದರೆ, ಯಾರೂ ಈ ಜೈಕಾರಕ್ಕೆ ಧ್ವನಿಗೂಡಿಸದಿದ್ದಾಗ, ಗಮನ ಸೆಳೆಯುವ ಉದ್ದೇಶದಿಂದ ಪಾಕ್ ಪರ ಘೋಷಣೆ ಕೂಗಿದ್ದಾನೆ ಎಂದು ತಿಳಿದುಬಂದಿದೆ. ಈ ಕೂಗಾಟವನ್ನು ಕೇಳಿದ ಸ್ಥಳೀಯರು ತಕ್ಷಣ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಡಿಸಿಪಿ ಹೇಳಿಕೆ
ವೈಟ್‌ಫೀಲ್ಡ್ ಡಿಸಿಪಿ ಶಿವ ಕುಮಾರ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದು, “ರಾತ್ರಿ 11 ಗಂಟೆ ಸುಮಾರಿಗೆ 112 ಮೂಲಕ ದೂರು ಬಂದಿತ್ತು. ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಸ್ಥಳೀಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತ ಛತ್ತೀಸ್‌ಗಢದವನಾಗಿದ್ದು, ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಪಿಜಿಯ ಗ್ಯಾಲರಿಯಲ್ಲಿ ಇಬ್ಬರು ಇದ್ದರೂ, ಓರ್ವನೇ ಘೋಷಣೆ ಕೂಗಿರುವುದು ದೃಢಪಟ್ಟಿದೆ. ಪ್ರಕರಣದ ತನಿಖೆ ಮುಂದುವರಿದಿದೆ,” ಎಂದು ತಿಳಿಸಿದ್ದಾರೆ.
ಪೊಲೀಸರು ಆರೋಪಿಯನ್ನು ಜೈಲಿಗೆ ಕಳುಹಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ವಿವರಗಳಿಗಾಗಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.