ಬೆಂಗಳೂರಿನ ಜೀವನ್ ಭೀಮಾನಗರದಲ್ಲಿ ಪಾರ್ಕಿಂಗ್ ವಿವಾದದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಮಹಿಳಾ ಕಾನ್ಸ್‌ಟೇಬಲ್ ಸಬ್ರೀನ್ ಎಂಬುವವರು ಯುವಕನೊಬ್ಬನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಘಟನೆಯನ್ನು ವಿಡಿಯೋ ಮಾಡುತ್ತಿದ್ದ ಮತ್ತೊಬ್ಬ ಯುವಕನ ಮೇಲೂ ಹಲ್ಲೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಜೀವನಭೀಮಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವರಾಜ್ ಎಂಬ ಕಾರು ಚಾಲಕ ಕಾರನ್ನು ಹಿಮ್ಮುಖವಾಗಿ ತೆಗೆಯುತ್ತಿದ್ದಾಗ, ಕಾರು ತಾಕುತ್ತದೆ ಎಂದು ಮಹಿಳಾ ಕಾನ್ಸ್‌ಟೇಬಲ್ ಸಬ್ರೀನ್ ಗಲಾಟೆ ತೆಗೆದಿದ್ದಾರೆ. ಈ ವೇಳೆ ಶಿವರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯನ್ನು ವಿಡಿಯೋ ಮಾಡುತ್ತಿದ್ದ ದರ್ಶನ್ ಎಂಬ ಯುವಕನ ಮೇಲೂ ಹಲ್ಲೆ ನಡೆಸಿ, ಕೆಳಗೆ ಬೀಳಿಸಿ ಕಾಲಿನಿಂದ ಒದ್ದಿದ್ದಾರೆ. ಈ ಘಟನೆಯ ಬಗ್ಗೆ ಜೆಬಿ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಠಾಣೆಯಲ್ಲಿ ಮಹಿಳಾ ಕಾನ್ಸ್‌ಟೇಬಲ್ ಸಬ್ರೀನ್ ಯುವಕರಿಗೆ ಕ್ಷಮೆ ಕೇಳಿದ್ದಾರೆ.