ಬೆಂಗಳೂರು: ಸಾಲದ ಹಣ ವಾಪಸ್ ಕೇಳಿದ ಕಾರಣಕ್ಕೆ ಸಂಬಂಧಿಕರಿಂದಲೇ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಬೆಂಗಳೂರಿನ ವಿವೇಕ್ ನಗರದಲ್ಲಿ ನಡೆದಿದೆ. ಕಳೆದ ಜುಲೈ 1, 2025ರ ಸಂಜೆ 5:20ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ವಿವೇಕ್ ನಗರದ ವೆಂಕಟರಮಣಿ ಎಂಬವರು ತಮ್ಮ ಸಂಬಂಧಿಕರಾದ ಪಾರ್ವತಿ ಎಂಬುವವರಿಗೆ ಮಗಳ ಮದುವೆಗಾಗಿ ಸುಮಾರು 5 ಲಕ್ಷ ರೂ. ಸಾಲವಾಗಿ ನೀಡಿದ್ದರು. ಆದರೆ, ವರ್ಷಗಳೇ ಕಳೆದರೂ ಪಾರ್ವತಿ ಹಣ ವಾಪಸ್ ಮಾಡಿರಲಿಲ್ಲ. ಇದರಿಂದ ಬೇಸತ್ತ ವೆಂಕಟರಮಣಿ, ಸಾಲದ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದರು. ಆದರೆ, ಪಾರ್ವತಿ ಮತ್ತು ಆಕೆಯ ಮಗಳು ಹಣ ಕೊಡುವುದಿಲ್ಲವೆಂದು ಬೆದರಿಕೆ ಹಾಕಿದ್ದರು.
ಈ ಕಾರಣಕ್ಕೆ ಕೋಪಗೊಂಡ ಪಾರ್ವತಿ, ತಮ್ಮ ಸಂಬಂಧಿಕ ಸುಬ್ರಮಣಿ ಎಂಬಾತನನ್ನು ಕರೆದುಕೊಂಡು ವೆಂಕಟರಮಣಿ ಅವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಅದೃಷ್ಟವಶಾತ್, ವೆಂಕಟರಮಣಿ ಕುಟುಂಬಸ್ಥರು ಗಂಡಾಂತರದಿಂದ ಪಾರಾಗಿದ್ದಾರೆ.
ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿ ಸುಬ್ರಮಣಿಯೇ ಈ ಕೃತ್ಯವೆಸಗಿರುವುದು ಬಯಲಾಗಿದೆ. ಈ ಸಂಬಂಧ ವೆಂಕಟರಮಣಿ ಅವರ ಪುತ್ರ ಸತೀಶ್ ಕುಮಾರ್, ಮಾಜಿ ಯೋಧ, ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳೊಂದಿಗೆ ದೂರು ದಾಖಲಿಸಿದ್ದಾರೆ.
ಪೊಲೀಸರು ಎಫ್‌ಐಆರ್ ದಾಖಲಿಸಿ, ಆರೋಪಿ ಸುಬ್ರಮಣಿಯನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಕಾನೂನು ಕ್ರಮಕ್ಕಾಗಿ ಪೊಲೀಸ್ ತನಿಖೆ ಚುರುಕುಗೊಂಡಿದೆ.