ಬೆಂಗಳೂರು: ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಗೆ ಭೇಟಿ ನೀಡಿ, ಕೃಷಿ ತ್ಯಾಜ್ಯದಿಂದ ಪರಿಸರ ಸ್ನೇಹಿ ಹಸಿರು ಜಲಜನಕ ಉತ್ಪಾದಿಸುವ ನವೀನ ಆವಿಷ್ಕಾರವನ್ನು ಶ್ಲಾಘಿಸಿದರು. ಈ ಆವಿಷ್ಕಾರವು ಪ್ರತಿ ಗಂಟೆಗೆ 5 ಕಿಲೋಗ್ರಾಂ 99% ಶುದ್ಧತೆಯ ಹಸಿರು ಜಲಜನಕವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಪರಿಸರದಿಂದ ಪ್ರತಿ ಕಿಲೋಗ್ರಾಂ ಜಲಜನಕ ಉತ್ಪಾದನೆಗೆ ಒಂದು ಕಿಲೋಗಿಂತಲೂ ಹೆಚ್ಚು ಇಂಗಾಲದ ಡೈಯಾಕ್ಸೈಡ್ ಅನ್ನು ಕಡಿಮೆ ಮಾಡುತ್ತದೆ.

ಸಚಿವರು ಐಐಎಸ್‌ಸಿಯ ಪ್ರೊಫೆಸರ್ ದಾಸಪ್ಪ ಮತ್ತು ತಂಡದಿಂದ ಅಭಿವೃದ್ಧಿಪಡಿಸಲಾದ ಈ ತಂತ್ರಜ್ಞಾನವನ್ನು “ಜಾಗತಿಕ ಸಾಧನೆ” ಎಂದು ಬಣ್ಣಿಸಿದರು. “ಕೃಷಿ ತ್ಯಾಜ್ಯವನ್ನು ಸಾಮಾನ್ಯವಾಗಿ ಸುಡಲಾಗುತ್ತದೆ, ಆದರೆ ಇದನ್ನು ಬಳಸಿಕೊಂಡು ಪರಿಸರ ಸ್ನೇಹಿ ಇಂಧನ ತಯಾರಿಸುವ ಈ ಆವಿಷ್ಕಾರವು ನಿಜವಾದ ಆತ್ಮನಿರ್ಭರ ಸಂಶೋಧನೆಯಾಗಿದೆ,” ಎಂದು ಜೋಶಿ ಹೇಳಿದರು. ಈ ತಂತ್ರಜ್ಞಾನವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 19,744 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹಸಿರು ಜಲಜನಕ ಮಿಷನ್‌ಗೆ ಸಂಪರ್ಕಗೊಂಡಿದೆ ಎಂದು ಅವರು ತಿಳಿಸಿದರು.
ಈ ಮಿಷನ್‌ನ ಗುರಿಗಳನ್ನು ಒತ್ತಿಹೇಳಿದ ಸಚಿವರು, ವಾರ್ಷಿಕ 5 ದಶಲಕ್ಷ ಮೆಟ್ರಿಕ್ ಟನ್ ಹಸಿರು ಜಲಜನಕ ಉತ್ಪಾದನೆ, 125 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯ, 8 ಲಕ್ಷ ಕೋಟಿ ರೂ. ಹೂಡಿಕೆ, 6 ಲಕ್ಷ ಉದ್ಯೋಗ ಸೃಷ್ಟಿ ಮತ್ತು 50 ದಶಲಕ್ಷ ಮೆಟ್ರಿಕ್ ಟನ್ ಇಂಗಾಲದ ಡೈಯಾಕ್ಸೈಡ್ ಕಡಿತವನ್ನು ಗುರಿಯಾಗಿಸಲಾಗಿದೆ ಎಂದರು. ಈಗಾಗಲೇ 3,000 ಮೆಗಾವ್ಯಾಟ್ ಎಲೆಕ್ಟ್ರೋಲೈಸರ್ ಉತ್ಪಾದನೆಗೆ ಪ್ರೋತ್ಸಾಹಧನ ಮತ್ತು 8.6 ಲಕ್ಷ ಟನ್ ಹಸಿರು ಜಲಜನಕ ಉತ್ಪಾದನಾ ಸಾಮರ್ಥ್ಯ ಹಂಚಿಕೆ ಮಾಡಲಾಗಿದೆ ಎಂದು ಉಲ್ಲೇಖಿಸಿದರು

ಸಚಿವ ಜೋಶಿ ಅವರು ಐಐಎಸ್‌ಸಿ ಸಮುದಾಯಕ್ಕೆ ನಾಲ್ಕು ಪ್ರಮುಖ ಸವಾಲುಗಳನ್ನು ಮುಂದಿಟ್ಟರು:
- ಜಲಜನಕ ಸಂಗ್ರಹಣೆ: ಸುರಕ್ಷಿತ ಮತ್ತು ಕೈಗೆಟುಕುವ ಶೇಖರಣಾ ಪರಿಹಾರಗಳ ಸಂಶೋಧನೆ.
- ಎಲೆಕ್ಟ್ರೋಲೈಸರ್ ವೆಚ್ಚ ಕಡಿತ: ಕಡಿಮೆ ವೆಚ್ಚದ, ದಕ್ಷ ಎಲೆಕ್ಟ್ರೋಲೈಸರ್ ಘಟಕಗಳ ಅಭಿವೃದ್ಧಿ.
- ಜಲಜನಕ ಚಾಲಿತ ಉಪಕರಣಗಳ ವೆಚ್ಚ ಕಡಿಮೆ: ಕೈಗೆಟುಕುವ ಜಲಜನಕ ವಾಹನಗಳು ಮತ್ತು ಇಂಧನ ಮರುಪೂರಣ ಕೇಂದ್ರಗಳ ಅಭಿವೃದ್ಧಿ.
- ಹಸಿರು ಜಲಜನಕ ಬೆಲೆ ಕಡಿತ: ಪ್ರತಿ ಕಿಲೋಗ್ರಾಂಗೆ 300-400 ರೂ.ನಿಂದ 100 ರೂ.ಗೆ ಇಳಿಕೆ.
“ಐಐಎಸ್‌ಸಿ ಹಸಿರು ಜಲಜನಕ ಸಂಶೋಧನೆಯಲ್ಲಿ ಭಾರತವನ್ನು ವಿಶ್ವದ ನಾಯಕನನ್ನಾಗಿ ಮಾಡಲಿ,” ಎಂದು ಕರೆ ನೀಡಿದ ಸಚಿವರು, ತಮ್ಮ ಸಚಿವಾಲಯದಿಂದ ಸಂಪೂರ್ಣ ಬೆಂಬಲ, ಧನಸಹಾಯ ಮತ್ತು ಕೈಗಾರಿಕಾ ಪಾಲುದಾರಿಕೆಯ ಭರವಸೆ ನೀಡಿ. “ಒಟ್ಟಾಗಿ ಭಾರತವನ್ನು ಹಸಿರು ಜಲಜನಕ ಆರ್ಥಿಕತೆಯಲ್ಲಿ ಮುಂಚೂಣಿಯನ್ನಾಗಿ ಮಾಡೋಣ,” ಎಂದು ಹೇಳಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.