ಬೆಂಗಳೂರು: ಬೆಂಗಳೂರಿನ ಜನರ ಮೇಲೆ ಕಸದ ಸೆಸ್ ಜೊತೆಗೆ ಬಳಕೆದಾರರ ಶುಲ್ಕವನ್ನು ವಿಧಿಸಿರುವ ಸರ್ಕಾರದ ನಿರ್ಧಾರವನ್ನು ಕೂಡಲೇ ಹಿಂಪಡೆದು, ಹಿಂದಿನಂತೆ ಚದರ ಅಡಿಗೆ ತಕ್ಕಂತೆ ಶುಲ್ಕ ವಿಧಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ಬಿಬಿಎಂಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಜನರ ಮೇಲೆ ಅತಿಯಾದ ತೆರಿಗೆಯ ಭಾರವನ್ನು ಹೇರಿದೆ ಎಂದು ಆರೋಪಿಸಿದರು. “ಇಡೀ ದೇಶದಲ್ಲಿ ಬೆಂಗಳೂರಿನಲ್ಲಿ ಮಾತ್ರ ಎರಡು ಬಗೆಯ ತೆರಿಗೆ ವಿಧಿಸಲಾಗಿದೆ. ಕಸದ ಸೆಸ್‌ನಿಂದ 250 ಕೋಟಿ ರೂ. ಸಂಗ್ರಹವಾಗುತ್ತಿದ್ದರೆ, ಕಸದ ಟೆಂಡರ್ ಮೌಲ್ಯ ಕೇವಲ 147 ಕೋಟಿ ರೂ. ಆಗಿದೆ. ಇದರ ಜೊತೆಗೆ ಬಳಕೆದಾರರ ಶುಲ್ಕ ಸೇರಿದರೆ 500-600 ಕೋಟಿ ರೂ. ಸಂಗ್ರಹವಾಗಲಿದೆ. ಈ ಹಣವನ್ನು ಯಾರ ಮನೆ ಹಾಳು ಮಾಡಲು ಸಂಗ್ರಹಿಸಲಾಗುತ್ತಿದೆ?” ಎಂದು ಅವರು ಪ್ರಶ್ನಿಸಿದರು.
“ಒಂದೋ ಸೆಸ್ ಇರಬೇಕು, ಇಲ್ಲವಾದರೆ ಬಳಕೆದಾರರ ಶುಲ್ಕ ಇರಬೇಕು. ಆದರೆ ಎರಡೂ ಶುಲ್ಕಗಳನ್ನು ವಿಧಿಸಿರುವುದರಿಂದ ಮನೆಗಳ ಬಾಡಿಗೆ, ವಾಣಿಜ್ಯ ಕಟ್ಟಡಗಳು, ಕಲ್ಯಾಣ ಮಂಟಪಗಳು, ಆಸ್ಪತ್ರೆಗಳು, ಶಾಲೆಗಳು ಮತ್ತು ಹೋಟೆಲ್‌ಗಳ ದರಗಳು ಏರಿಕೆಯಾಗಲಿವೆ. ಇದು ಅನಾಗರಿಕ ನಡೆ. ಕೇಂದ್ರ ಸರ್ಕಾರದ ಕಾಯ್ದೆ ಎಂದು ನೆಪ ಹೇಳುವ ಸರ್ಕಾರ, ಎರಡು ಶುಲ್ಕಗಳನ್ನು ವಿಧಿಸಬೇಕೆಂದು ಕೇಂದ್ರ ಎಲ್ಲೂ ಹೇಳಿಲ್ಲ,” ಎಂದು ಅಶೋಕ ಟೀಕಿಸಿದರು.
ಶಾಸಕರ ಸಭೆ ಕರೆಯಿರಿ ಬೆಂಗಳೂರಿನ ಶಾಸಕರ ಸಭೆ ಕರೆದು ಈ ವಿಷಯವನ್ನು ಚರ್ಚಿಸಬೇಕು ಎಂದು ಆರ್.ಅಶೋಕ ಒತ್ತಾಯಿಸಿದರು. “ಹಿಂದೆ ಚದರ ಅಡಿಗೆ ತಕ್ಕಂತೆ ಕಸದ ಸೆಸ್ ವಿಧಿಸಲಾಗುತ್ತಿತ್ತು. ಅದೇ ಮಾದರಿಯನ್ನು ಮತ್ತೆ ಜಾರಿಗೆ ತರಬೇಕು. ಬೇರೆ ಯಾವ ನಗರದಲ್ಲೂ ಇಂತಹ ಶುಲ್ಕವಿಲ್ಲ. ಕಾಂಗ್ರೆಸ್‌ನ ಐದು ಗ್ಯಾರಂಟಿಗಳಿಗಾಗಿ ಜನರಿಂದ ಈ ರೀತಿ ತೆರಿಗೆ ವಸೂಲಿ ಮಾಡಲಾಗುತ್ತಿದೆ,” ಎಂದು ಅವರು ಆಕ್ಷೇಪಿಸಿದರು.
ಜನರ ಹೋರಾಟಕ್ಕೆ ಬೆಂಬಲ ಬೆಂಗಳೂರಿನ ಜನರು ಈಗಾಗಲೇ ಈ ಶುಲ್ಕದ ವಿರುದ್ಧ ಹೋರಾಟ ಆರಂಭಿಸಿದ್ದಾರೆ ಎಂದು ತಿಳಿಸಿದ ಆರ್.ಅಶೋಕ, ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು. “ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದೆ. ಇದಕ್ಕಾಗಿ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಕಾಂಗ್ರೆಸ್‌ಗೆ ಮತ ನೀಡಿದವರಿಗೆ ಮಾತ್ರ ಗ್ಯಾರಂಟಿಗಳು ಸೀಮಿತವಾಗಲಿವೆ,” ಎಂದು ವಾಗ್ದಾಳಿ ನಡೆಸಿದರು.
ಕಮಲ್ ಹಾಸನ್‌ಗೆ ಟೀಕೆ ಕಮಲ್ ಹಾಸನ್ ಅವರನ್ನು ಟೀಕಿಸಿದ ಆರ್.ಅಶೋಕ, “ಕಮಲ್ ಹಾಸನ್ ಕನ್ನಡ ಸಿನಿಮಾದಲ್ಲಿ ಕೆಲಸ ಮಾಡಿದವರು. ಆದರೆ ಕನ್ನಡವನ್ನು ಅವಹೇಳನ ಮಾಡುವುದು ಆತನ ನಗರ ನಕ್ಸಲ್ ಮನೋಭಾವವನ್ನು ತೋರಿಸುತ್ತದೆ. ಕನ್ನಡಿಗರು ಆತನಿಗೆ ಬಹಿಷ್ಕಾರ ಹಾಕಬೇಕು. ರಾಜ್ಯಕ್ಕೆ ಪ್ರವೇಶಕ್ಕೂ ಅವಕಾಶ ನೀಡಬಾರದು. ಆತನ ಚಿತ್ರಗಳ ಪ್ರದರ್ಶನವನ್ನು ನಿಷೇಧಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.
ಕರಾವಳಿಯಲ್ಲಿ ಭಯೋತ್ಪಾದನೆ ಆತಂಕ ಕರಾವಳಿ ಭಾಗದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಅವರು, “ಕೊಲೆಗೆ ಕೊಲೆ ಎಂಬ ಮನಸ್ಥಿತಿ ಒಳ್ಳೆಯ ಬೆಳವಣಿಗೆಯಲ್ಲ. ಹಿಂದೂ ಕಾರ್ಯಕರ್ತರ ಹತ್ಯೆಯಾದಾಗಲೂ ನಾವು ಹೋರಾಟ ನಡೆಸಿದ್ದೆವು. ಸರ್ಕಾರ ಯಾರನ್ನೋ ಓಲೈಕೆ ಮಾಡುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಮತೀಯವಾದಕ್ಕೆ ಪುಷ್ಠಿ ನೀಡುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ,” ಎಂದು ಆರೋಪಿಸಿದರು.