ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ವಿದ್ಯುತ್ ಅವಘಡದಲ್ಲಿ ಬಿ.ಟಿ.ಎಂ. 2ನೇ ಹಂತದ ಡಾಲರ್ಸ್ ಕಾಲೋನಿ ಬಳಿಯ ಎನ್.ಎಸ್. ಪಾಳ್ಯದಲ್ಲಿ ಮನಮೋಹನ್ ಕಾಮತ್ ಮತ್ತು ದಿನೇಶ್ ಎಂಬಿಬ್ಬರು ಮೃತಪಟ್ಟಿರುವ ಘಟನೆಯ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಅಧಿಕಾರಿಗಳ ಜೊತೆಗೆ ಘಟನಾ ಸ್ಥಳವನ್ನು ಪರಿಶೀಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಗ್ಗು ಪ್ರದೇಶಗಳಲ್ಲಿ ಅಂಡರ್‌ಗ್ರೌಂಡ್ ವಾಹನ ನಿಲ್ದಾಣ ನಿರ್ಮಾಣಕ್ಕೆ ಅವಕಾಶ ನೀಡದಂತೆ ಭವಿಷ್ಯದಲ್ಲಿ ಕಾನೂನು ಜಾರಿಗೆ ತರಲಾಗುವುದು ಎಂದು ಘೋಷಿಸಿದರು. “ಕೆರೆಗಳ ಸಮೀಪ ಮತ್ತು ತಗ್ಗು ಪ್ರದೇಶಗಳಲ್ಲಿ ಅಂಡರ್‌ಗ್ರೌಂಡ್ ನಿರ್ಮಾಣಕ್ಕೆ ಅನುಮತಿ ನೀಡುವುದಿಲ್ಲ. ಮಳೆ ಕಡಿಮೆಯಾದ ಬಳಿಕ ಈ ಬಗ್ಗೆ ಕಾರ್ಯಸೂಚಿ ಬಿಡುಗಡೆ ಮಾಡಲಾಗುವುದು,” ಎಂದು ಶಿವಕುಮಾರ್ ತಿಳಿಸಿದರು.
ನೆಲಮಹಡಿಯಲ್ಲಿ ವಾಹನ ನಿಲ್ದಾಣಕ್ಕೆ ಯೋಜನೆ
“ಅಂಡರ್‌ಗ್ರೌಂಡ್‌ಗೆ ಬದಲಾಗಿ ನೆಲಮಹಡಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವ ಯೋಜನೆ ರೂಪಿಸಲಾಗುವುದು. ಜನರು ತಮ್ಮ ವಾಸಕ್ಕಾಗಿ ಮೇಲೆ ಮನೆ ನಿರ್ಮಿಸಿಕೊಳ್ಳಬಹುದು,” ಎಂದು ಅವರು ಸ್ಪಷ್ಟಪಡಿಸಿದರು.
ಘಟನೆಯ ವಿವರ ನೀಡಿದ ಶಿವಕುಮಾರ್, “ಅಂಡರ್‌ಗ್ರೌಂಡ್‌ನಲ್ಲಿ ಸಂಗ್ರಹವಾಗಿದ್ದ ನೀರನ್ನು ಪಂಪ್ ಮೂಲಕ ಖಾಲಿ ಮಾಡುವಾಗ ಅಧಿಕಾರಿಗಳು, ಪೊಲೀಸರು ಮತ್ತು ಸಹಾಯಕ್ಕೆ ಬಂದವರಿಗೂ ವಿದ್ಯುತ್ ಆಘಾತವಾಗಿದೆ. ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಜಾನುವಾರುಗಳ ಸಾವಿಗೂ ಪರಿಹಾರ ಒದಗಿಸಲಾಗುವುದು. ಅಧಿಕಾರಿಗಳಿಗೆ ದಿನವಿಡೀ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ,” ಎಂದರು.
ಬಿಬಿಎಂಪಿ, ಬಿಡಬ್ಲೂಎಸ್‌ಎಸ್‌ಬಿ ವಿರುದ್ಧ ದೂರು
ಬಿಬಿಎಂಪಿ ಮತ್ತು ಬಿಡಬ್ಲೂಎಸ್‌ಎಸ್‌ಬಿಯಿಂದ ಸೂಕ್ತ ಪ್ರತಿಕ್ರಿಯೆ ದೊರೆಯುತ್ತಿಲ್ಲ ಎಂಬ ಸಾರ್ವಜನಿಕರ ದೂರಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಬೆಂಗಳೂರಿನ ಜನಸಂಖ್ಯೆ 1.4 ಕೋಟಿಯಷ್ಟಿದೆ. ವಾರ್ ರೂಮ್‌ನಲ್ಲಿ ಎಲ್ಲರೂ ತಂಡವಾಗಿ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮಗಳು ಸ್ವತಃ ಬಂದು ಕೆಲಸದ ರೀತಿ ನೋಡಬಹುದು,” ಎಂದು ತಿಳಿಸಿದರು.
ಸಾಮಾಜಿಕ ಮಾಧ್ಯಮದ ಟೀಕೆಗೆ ತಿರುಗೇಟು
ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಟೀಕೆಗಳ ಬಗ್ಗೆ ಕೇಳಿದಾಗ, “ಇಂತಹ ಟೀಕೆಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರುವುದಿಲ್ಲ, ಬೆಂಗಳೂರಿನ ಹೆಸರನ್ನೇ ಹಾಳು ಮಾಡುತ್ತವೆ,” ಎಂದು ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದರು.
ಬಿಜೆಪಿಯವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವ್ಯಂಗ್ಯ ಮಾಡಿರುವ ಬಗ್ಗೆ ಕೇಳಿದಾಗ, “ಅವರಿಂದ ಇನ್ನೇನು ಮಾಡಲು ಸಾಧ್ಯ? ನಾವು ಎರಡು ವರ್ಷದ ಸಾಧನೆಯನ್ನು ಆಚರಿಸಿದ್ದೇವೆ. ಮೋದಿಯವರ ಸರ್ಕಾರ 5 ವರ್ಷ ತುಂಬಿದಾಗ ಸಂಭ್ರಮಾಚರಣೆ ಮಾಡಿಲ್ಲವೇ? ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಆಚರಣೆಗೆ ನಮಗೆ ಹಕ್ಕಿಲ್ಲವೇ? ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು, ಆಗ ಮಳೆ ಬಂದಿದೆ. ಈಗಿನ ಸಮಸ್ಯೆಗಳನ್ನು ಬಗೆಹರಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ,” ಎಂದರು.
ಮುಂದಿನ ದಿನಗಳಲ್ಲಿ ಜಾಗೃತಿ
ಮುಂದಿನ 4-5 ದಿನಗಳ ಕಾಲ ಭಾರೀ ಮಳೆಯಾಗುವ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಮಳೆ ಜಾಸ್ತಿಯಾಗಿ ಬರಬಹುದು. ಈ ಬಗ್ಗೆ ನಾವು ಜಾಗೃತರಾಗಿದ್ದೇವೆ. ಸಾರ್ವಜನಿಕರ ಸಹಕಾರದೊಂದಿಗೆ ವಾರ್ ರೂಮ್ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಲಾಗುತ್ತಿದೆ,” ಎಂದು ಭರವಸೆ ನೀಡಿದರು.