ಬೆಂಗಳೂರು: ಬೆಂಗಳೂರಿನ ಮೆಟ್ರೋ ಸಂಚಾರ ಜಾಲವು ಸುಮಾರು 100 ಕಿಮೀ ತಲುಪಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರಕಾರದ ಆದ್ಯತೆ ಮತ್ತು ಮೂಲಭೂತ ಸೌಕರ್ಯಕ್ಕೆ ನೀಡಿದ ಪ್ರಾಮುಖ್ಯತೆಯೇ ಕಾರಣ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರ ಉಪಸ್ಥಿತಿಯಲ್ಲಿ ತೇಜಸ್ವಿ ಸೂರ್ಯ ಮಾತನಾಡಿದರು. 2014ರಲ್ಲಿ ಮೋದಿಯವರು ಪ್ರಧಾನಿಯಾಗುವ ಮೊದಲು ಬೆಂಗಳೂರಿನ ಮೆಟ್ರೋ ಕನೆಕ್ಟಿವಿಟಿ ಕೇವಲ 7.5 ಕಿಮೀ ಇತ್ತು. ಆಗಸ್ಟ್ 10ರಂದು ಯೆಲ್ಲೋ ಲೈನ್ ಉದ್ಘಾಟನೆಯ ನಂತರ ಇದು ಸುಮಾರು 100 ಕಿಮೀಗೆ ವಿಸ್ತರಣೆಯಾಗಲಿದೆ. ದೆಹಲಿಯ ನಂತರ ದೇಶದಲ್ಲೇ ಅತಿ ದೊಡ್ಡ ಮೆಟ್ರೋ ಜಾಲವಾಗಿ ಬೆಂಗಳೂರು ಮೆಟ್ರೋ ಗುರುತಿಸಲ್ಪಡಲಿದೆ ಎಂದು ಅವರು ವಿವರಿಸಿದರು.
ಪ್ರಧಾನಿಯವರ ಆಗಮನಕ್ಕೆ ಸ್ವಾಗತ: ಪ್ರಧಾನಮಂತ್ರಿ ಮೋದಿಯವರನ್ನು ಯಾರು ಕರೆಸಿದರು ಎಂಬ ಪ್ರಶ್ನೆಗೆ ಉತ್ತರಿಸುವ ಅಗತ್ಯವಿಲ್ಲ ಎಂದ ತೇಜಸ್ವಿ ಸೂರ್ಯ, ಬೆಂಗಳೂರಿನ ಮೆಟ್ರೋ ಯೋಜನೆಯ ಉದ್ಘಾಟನೆ ಆದಷ್ಟು ಬೇಗ ಆಗಬೇಕೆಂದು ಪ್ರಧಾನಿಯವರು ದಿನಾಂಕ ನಿಗದಿಪಡಿಸಿ ಆಗಮಿಸುತ್ತಿದ್ದಾರೆ. ಕರ್ನಾಟಕ, ದೆಹಲಿ ಮಾತ್ರವಲ್ಲ, ಇಡೀ ಭಾರತದ ಪ್ರಧಾನಿಯಾಗಿರುವ ಅವರ ಆಗಮನವನ್ನು ರಾಜ್ಯ ಸರಕಾರ, ಬಿಜೆಪಿ ಮತ್ತು ಜನತೆ ಉತ್ಸಾಹದಿಂದ ಸ್ವಾಗತಿಸಲು ಸಜ್ಜಾಗಿದ್ದಾರೆ ಎಂದರು.
ರಾಜ್ಯ ಸರಕಾರದ ಮೇಲೆ ಟೀಕೆ: ಯೆಲ್ಲೋ ಲೈನ್ ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರಕಾರದ ಕೊಡುಗೆಯನ್ನು ಪ್ರಶ್ನಿಸಿದ ತೇಜಸ್ವಿ ಸೂರ್ಯ, ಕಳೆದ ಎರಡೂವರೆ ವರ್ಷಗಳಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಈ ಯೋಜನೆಯ ಬಗ್ಗೆ ಗಮನಹರಿಸಿಲ್ಲ ಎಂದು ಆರೋಪಿಸಿದರು. ಈ ಯೋಜನೆ 2018ರಲ್ಲಿ ಆರಂಭವಾಗಿದ್ದು, 2021ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಕೋವಿಡ್ ಮತ್ತು ಭೂಸ್ವಾಧೀನ ಸಮಸ್ಯೆಗಳಿಂದ ವಿಳಂಬವಾಯಿತು. ಆದರೆ, ಕಾಂಗ್ರೆಸ್ ಸರಕಾರ ಯಾವುದೇ ಸಹಾಯ ಮಾಡಲಿಲ್ಲ ಎಂದು ಟೀಕಿಸಿದರು.
ಯಡಿಯೂರಪ್ಪ, ಬೊಮ್ಮಾಯಿ ಸರಕಾರದ ಕೊಡುಗೆ: ಕೋವಿಡ್ ಸಂದರ್ಭದಲ್ಲೂ ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ಸಿವಿಲ್ ಕಾಮಗಾರಿಗಳು ನಡೆದವು. ಕಾರ್ಮಿಕರ ಕೊರತೆಯ ಸಮಸ್ಯೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಯಿತು. ಬೊಮ್ಮಾಯಿ ಅವಧಿಯಲ್ಲಿ ಶೇ. 95 ಸಿವಿಲ್ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ಕಾಂಗ್ರೆಸ್ ಸರಕಾರ ಬಿಎಂಆರ್‌ಸಿಎಲ್‌ಗೆ ಪೂರ್ಣಾವಧಿ ಎಂ.ಡಿ. ನೇಮಕ ಮಾಡಲು ವಿಫಲವಾಯಿತು. ಕಳೆದ ವರ್ಷ ಜನವರಿಯಲ್ಲಿ ಮೂರು ತಿಂಗಳ ಹೋರಾಟದ ಬಳಿಕವೇ ಮೊದಲ ಬಾರಿಗೆ ಪೂರ್ಣಾವಧಿ ಎಂ.ಡಿ. ನೇಮಕವಾಯಿತು ಎಂದು ತೇಜಸ್ವಿ ಸೂರ್ಯ ದೂರಿದರು.
ವೀಸಾ ಸಮಸ್ಯೆಯ ಬಗ್ಗೆ ಮೌನ: ರಾಜ್ಯ ಸರಕಾರವು ವೀಸಾ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಿಲ್ಲ ಎಂದು ಆರೋಪಿಸಿದ ಅವರು, ಆರ್‌ಸಿಬಿ ಕ್ರಿಕೆಟ್ ಗೆದ್ದಾಗ ಸರಕಾರ ತಾವೇ ಗೆದ್ದಂತೆ ಸಂಭ್ರಮಿಸಿತು. ಆದರೆ, ಮೆಟ್ರೋ ಯೋಜನೆಯ ಸಮಸ್ಯೆಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಹೋರಾಟದ ಫಲ: ಯೆಲ್ಲೋ ಲೈನ್ ಉದ್ಘಾಟನೆಗೆ ಆಗಸ್ಟ್ 15ರೊಳಗೆ ಎಂದು ಘೋಷಿಸಲು ಶಾಸಕರು, ಸಂಸದರು ಮತ್ತು ಸಾರ್ವಜನಿಕರ ಹೋರಾಟವೇ ಕಾರಣ ಎಂದ ತೇಜಸ್ವಿ ಸೂರ್ಯ, ಈ ಯೋಜನೆಯಲ್ಲಿ ಬಿಜೆಪಿಯ ಕೊಡುಗೆಯನ್ನು ಜನರು ಗುರುತಿಸುತ್ತಾರೆ ಎಂದರು.