ಬೆಂಗಳೂರು, ಮಕ್ಕಳಲ್ಲಿ ಎಳೆ ವಯಸ್ಸಿನಿಂದಲೇ ಪರಿಸರ, ಹಸಿರು ಇಂಧನ, ಸ್ವಚ್ಛತೆ, ನೀರಿನ ಸಂರಕ್ಷಣೆ ಮತ್ತು ಗುಣಮಟ್ಟದ ಗಾಳಿಯ ಬಗ್ಗೆ ಜಾಗೃತಿ ಮೂಡಿಸಲು ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಶಾಲೆಗಳ ಸಹಯೋಗದೊಂದಿಗೆ ಬೆಂಗಳೂರು ಹವಾಮಾನ ಕಾರ್ಯಯೋಜನೆ ಕ್ಲಬ್‌ಗಳನ್ನು ರಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 5ರ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಈ ಕ್ಲಬ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. “ಪ್ರತಿ ಕ್ಲಬ್‌ನಲ್ಲಿ ಒಬ್ಬ ಶಿಕ್ಷಕರು ಮತ್ತು ಕನಿಷ್ಠ 25 ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ. ಇವರಿಗೆ ಪ್ರಮಾಣಪತ್ರಗಳು ಮತ್ತು ಬ್ಯಾಡ್ಜ್‌ಗಳನ್ನು ನೀಡಲಾಗುವುದು,” ಎಂದು ಶಿವಕುಮಾರ್ ವಿವರಿಸಿದರು.
650 ಶಾಲೆಗಳ ಒಪ್ಪಿಗೆ, 18 ಕ್ಲಬ್‌ಗಳ ರಚನೆ
ಜಿಬಿಎ ವ್ಯಾಪ್ತಿಯಲ್ಲಿ 6,000 ಶಾಲೆಗಳಿದ್ದು, ಇವುಗಳಲ್ಲಿ 4,500 ಖಾಸಗಿ ಮತ್ತು 1,500 ಸರ್ಕಾರಿ ಶಾಲೆಗಳಿವೆ. ಈ ಎಲ್ಲಾ ಶಾಲೆಗಳನ್ನು ಯೋಜನೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದ್ದು, ಈಗಾಗಲೇ 650 ಶಾಲೆಗಳು ಮತ್ತು ಪಿಯು ಕಾಲೇಜುಗಳು ಒಪ್ಪಿಗೆ ನೀಡಿವೆ. ಈವರೆಗೆ 18 ಕ್ಲಬ್‌ಗಳು ರಚನೆಯಾಗಿ ಕಾರ್ಯನಿರ್ವಹಿಸುತ್ತಿವೆ. “ಸಾರ್ವಜನಿಕ ಸಂಘ ಸಂಸ್ಥೆಗಳಿಗೂ ಕ್ಲಬ್‌ಗಳನ್ನು ರಚಿಸಲು ಅವಕಾಶ ನೀಡಲಾಗುವುದು. ಜೂನ್ 6ರಂದು ಇದಕ್ಕಾಗಿ ವೆಬ್‌ಸೈಟ್ ಅನಾವರಣಗೊಳಿಸಲಾಗುವುದು,” ಎಂದು ಶಿವಕುಮಾರ್ ತಿಳಿಸಿದರು.
ಬ್ಲೂ ಮತ್ತು ಗ್ರೀನ್ ಅವಾರ್ಡ್‌ಗಳು
ಕ್ಲಬ್‌ಗಳಲ್ಲಿ ಭಾಗವಹಿಸುವವರಿಗೆ ಬ್ಲೂ ಮತ್ತು ಗ್ರೀನ್ ಅವಾರ್ಡ್‌ಗಳನ್ನು ನೀಡಲಾಗುವುದು. ಈ ಕ್ಲಬ್‌ಗಳು ಹಸಿರು ಇಂಧನ, ಘನ ತ್ಯಾಜ್ಯ ನಿರ್ವಹಣೆ, ಗಾಳಿಯ ಗುಣಮಟ್ಟ, ತ್ಯಾಜ್ಯ ನೀರು, ಮಳೆನೀರು, ನಗರ ಯೋಜನೆ, ಮತ್ತು ವಿಪತ್ತು ನಿರ್ವಹಣೆಯಂತಹ ವಿಷಯಗಳ ಮೇಲೆ ಕೇಂದ್ರೀಕರಿಸಲಿವೆ. ಈ ವಿಷಯಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿದ 175 ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿಗಳನ್ನು ನೀಡಲು 15 ತೀರ್ಪುಗಾರರ ತಂಡವನ್ನು ನೇಮಿಸಲಾಗಿದೆ.
ಜೂನ್ 6ರಂದು ಕಾರ್ಯಕ್ರಮ
ಜೂನ್ 6ರ ಸಂಜೆ ನೆಹರೂ ತಾರಾಲಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುವುದು. “ಮುಂದಿನ ದಿನಗಳಲ್ಲಿ ಈ ಕ್ಲಬ್‌ಗಳ ಮೂಲಕ ರಸಪ್ರಶ್ನೆ, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುವುದು,” ಎಂದು ಶಿವಕುಮಾರ್ ಹೇಳಿದರು.
ಸ್ವಚ್ಛ ಬೆಂಗಳೂರು ಯೋಜನೆ
“ಜೂನ್ 6ರಂದು ಸ್ವಚ್ಛ ಬೆಂಗಳೂರು ಯೋಜನೆಯನ್ನು ಘೋಷಿಸಲಾಗುವುದು. ಬೆಂಗಳೂರಿನ ಕಸವನ್ನು ಒಂದೇ ಬಾರಿಗೆ ತೆಗೆಯಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು ಕಸದ ಸ್ಥಳಗಳ ಬಗ್ಗೆ ಜಿಬಿಎ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ರಸ್ತೆ ಬದಿಯಲ್ಲಿ ಕಸ ಸುರಿಯುವುದನ್ನು ತಡೆಯಲು ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ,” ಎಂದು ಶಿವಕುಮಾರ್ ತಿಳಿಸಿದರು.
ಪಾರ್ಕ್ ಮತ್ತು ಕೆರೆಗಳ ಅಭಿವೃದ್ಧಿ
2023-24ರಲ್ಲಿ 19 ಹೊಸ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, 47 ಪಾರ್ಕ್‌ಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. 19 ಕೆರೆಗಳನ್ನು ಅಭಿವೃದ್ಧಿಪಡಿಸಿ, 40 ಕೆರೆಗಳಿಗೆ ಬೇಲಿ ಹಾಕಲಾಗಿದೆ. ಇದಕ್ಕಾಗಿ 34.50 ಕೋಟಿ ರೂ. ವೆಚ್ಚವಾಗಿದೆ. 2025-26ರಲ್ಲಿ ಉದ್ಯಾನವನಗಳ ಮೇಲ್ದರ್ಜೆಗೆ 80 ಕೋಟಿ ರೂ. ಮತ್ತು ಕೆರೆಗಳ ಅಭಿವೃದ್ಧಿಗೆ 250 ಕೋಟಿ ರೂ. ಮೀಸಲಿಡಲಾಗಿದೆ.
ಮರಗಣತಿ ಮತ್ತು ಗ್ರೀನ್ ವಾರ್ಡ್
ನ್ಯಾಯಾಲಯದ ನಿರ್ದೇಶನದಂತೆ ನಗರದಲ್ಲಿ ಮರಗಣತಿ ನಡೆಸಲು ತೀರ್ಮಾನಿಸಲಾಗಿದ್ದು, ಮಹದೇವಪುರ ಮತ್ತು ಬೊಮ್ಮನಹಳ್ಳಿಯಲ್ಲಿ ಪ್ರಾಯೋಗಿಕ ಯೋಜನೆ ಆರಂಭವಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಒಂದು ವಾರ್ಡ್‌ಗೆ 1 ಕೋಟಿ ರೂ. ಮೀಸಲಿಟ್ಟು ಬೆಂಗಳೂರು ಗ್ರೀನ್ ವಾರ್ಡ್ ಆಗಿ ರೂಪಿಸಲಾಗುವುದು.
ಪ್ರಶ್ನೋತ್ತರ
ಕ್ಲಬ್‌ಗಳ ಕಾರ್ಯಚಟುವಟಿಕೆ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಶಿವಕುಮಾರ್, “ಅಧಿಕಾರಿಗಳ ತಂಡವನ್ನು ನೇಮಿಸಲಾಗಿದೆ. ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಅವರ ತಂಡವೂ ಇದರಲ್ಲಿ ಕಾರ್ಯನಿರ್ವಹಿಸುತ್ತಿದೆ,” ಎಂದರು. ವಾಹನಗಳ ಹೊಗೆಯಿಂದ ವಾಯುಮಾಲಿನ್ಯದ ಕುರಿತು ಕೇಳಿದಾಗ, “ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ,” ಎಂದರು. ಮರಗಣತಿಯ ಬಗ್ಗೆ, “6.50 ಲಕ್ಷ ಮರಗಳನ್ನು ಗುರುತಿಸಿದ್ದೇವೆ,” ಎಂದು ತಿಳಿಸಿದರು.
ಕಸದ ಸಮಸ್ಯೆಗೆ ಸಂಬಂಧಿಸಿದಂತೆ, “ಮಾರ್ಷಲ್‌ಗಳು ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರ ಸಹಕಾರ ಅಗತ್ಯ. ಕಸ ಎಸೆಯುವವರಿಗೆ ದಂಡ ಏರಿಕೆ ಮಾಡಲು ಚಿಂತಿಸುತ್ತಿದ್ದೇವೆ,” ಎಂದರು. ಜಿಬಿಎ ವ್ಯಾಪ್ತಿ ನಿಗದಿಗೆ ಸಂಬಂಧಿಸಿದಂತೆ, “ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಎರಡು-ಮೂರು ದಿನಗಳಲ್ಲಿ ಚುನಾವಣೆಗೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ಹೇಳಿದರು.