ಬೆಂಗಳೂರು:ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರವು ಟನಲ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ, ಬಫರ್ ರೋಡ್, ಎಲಿವೇಟೆಡ್ ಕಾರಿಡಾರ್, ಬೆಂಗಳೂರು ಬಿಸಿನೆಸ್ ಕಾರಿಡಾರ್ ಸೇರಿದಂತೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಾದ ಸುಧಾಮ್ ದಾಸ್ ಅವರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಅವರು, ಬೆಂಗಳೂರಿನ ಸಮಸ್ಯೆ, ಜನಸಂಖ್ಯೆ ದಟ್ಟಣೆ ವಿಚಾರವಾಗಿ ಸದಸ್ಯರಾದ ಸುಧಾಮ್ ದಾಸ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ನಾನು ಬಹಳ ಗಂಭೀರವಾಗಿ ಬೆಂಗಳೂರಿನ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಬೆಂಗಳೂರು ನವದೆಹಲಿ ರೀತಿ ಯೋಜಿತ ನಗರವಲ್ಲ. ಮಲ್ಲೇಶ್ವರ, ಜಯನಗರ, ಇಂದಿರಾನಗರದಂತಹ ಕೆಲವು ಬಡಾವಣೆಗಳು ಮಾತ್ರ ಯೋಜಿತವಾಗಿ ರೂಪುಗೊಂಡಿವೆ. ಈ ಹಿಂದೆ ಬಿಎಂಐಸಿಪಿ ರಸ್ತೆ ಆದ ಕಾರಣ ಸಂಚಾರ ದಟ್ಟಣೆ ಸ್ವಲ್ಪ ಮಟ್ಟಿಗೆ ನಿಯಂತ್ರಣವಾಗಿದೆ. ಇಲ್ಲದಿದ್ದರೆ ಪರಿಸ್ಥಿತಿ ಇನ್ನು ಹದಗೆಡುತ್ತಿತ್ತು. ಈಗ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪಿಆರ್‍ಆರ್ ಯೋಜನೆ ಮಾಡಲು 2006ರಲ್ಲಿ ಅಧಿಸೂಚನೆ ಹೊರಡಿಸಿದ್ದರೂ ನಂತರ ಅದು ಮುಂದಕ್ಕೆ ಸಾಗಲಿಲ್ಲ. ಆಗಲೇ ಮಾಡಿದ್ದರೆ 2-3 ಸಾವಿರ ಕೋಟಿಯಲ್ಲಿ ಯೋಜನೆ ಪೂರ್ಣಗೊಳ್ಳುತ್ತಿತ್ತು ಎಂದರು.ಈಗ ಪಿಆರ್‍ಆರ್ ಯೋಜನೆಗೆ ಹುಡ್ಕೋ ಮೂಲಕ 26 ಸಾವಿರ ಕೋಟಿ ಸಾಲ ಪಡೆದು ರೈತರನ್ನು ಒಪ್ಪಿಸಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ಮಾಡಲು ಮುಂದಾಗಿದ್ದೇವೆ. ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ರಸ್ತೆ ಅಗಲೀಕರಣ ಮಾಡಬಹುದೆ, ಅಥವಾ ಬೇರೆ ಅವಕಾಶಗಳಿವೆಯೇ ಎಂದು ಆಲೋಚನೆ ಮಾಡಿದ್ದೇವೆ. ಈ ಹಿಂದೆ ಜಾರ್ಜ್ ಅವರು ಸಚಿವರಾಗಿದ್ದಾಗ ಸ್ಟೀಲ್ ಬ್ರಿಡ್ಜ್ ಮಾಡಲು ಹೋದಾಗ ಗಲಾಟೆ ಮಾಡಿ ಅದನ್ನು ನಿಲ್ಲಿಸಿದರು. ಈಗ ಅದರ ತೊಂದರೆ ಅನುಭವಿಸುತ್ತಿದ್ದೇವೆ. ಈಗ ಈ ಸಮಸ್ಯೆಗೆ ಪರಿಹಾರವಾಗಿ ಬೆಂಗಳೂರು ನಗರದ ಪೂರ್ವದಿಂದ ಪಶ್ಚಿಮಕ್ಕೆ (17 ಕಿ.ಮೀ), ದಕ್ಷಿಣದಿಂದ ಉತ್ತರಕ್ಕೆ (23 ಕಿ.ಮೀ) 40 ಕಿ.ಮೀ ಉದ್ದದ ಸುರಂಗ ರಸ್ತೆ ಮಾಡಲು ಹೊರಟಿದ್ದೇವೆ. ಬೆಂಗಳೂರು ನಗರದಲ್ಲಿ ಇದು ಮೊದಲ ಪ್ರಯತ್ನವಾಗಿದೆ. ಇದರ ಮೊದಲ ಹಂತದ ಯೋಜನೆಗೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುತ್ತಿದೆ. ಅತಿಲೋಕ್ ಇಂಜಿನಿಯರಿಂಗ್ ಸಂಸ್ಥೆ ಡಿಪಿಆರ್ ಸಿದ್ಧಪಡಿಸಿದ್ದು, ಸರ್ಕಾರ ಅದಕ್ಕೆ ಅನುಮತಿ ನೀಡಿದೆ ಎಂದು ತಿಳಿಸಿದರು.ಇನ್ನು ಬೆಂಗಳೂರಿನಲ್ಲಿ ಹೊಸ ಪ್ರಯೋಗದ ಮೂಲಕ ಎಲ್ಲೆಲ್ಲಿ ಹೊಸ ಮೆಟ್ರೋ ಮಾರ್ಗಗಳು ಬರುತ್ತಿವೆಯೋ ಅಲ್ಲಿ 44.3 ಕಿ.ಮೀ ಉದ್ಧದ ಡಬಲ್ ಡೆಕ್ಕರ್ ಮೇಲ್ಸೆತುವೆ ಮೂಲಕ ಮೇಲ್ಸೆತುವೆ ಹಾಗೂ ಮೆಟ್ರೋ ಮಾರ್ಗ ಮಾಡಲಾಗುತ್ತಿದೆ. ಈ ಯೋಜನೆಗೆ ಪಾಲಿಕೆ ಹಾಗೂ ಬಿಎಂಆರ್‍ಸಿಎಲ್ 50:50 ಅನುಪಾತದಲ್ಲಿ ವೆಚ್ಚ ಭರಿಸಲಿವೆ. ಪ್ರತಿ ಕಿ.ಮೀಗೆ ರೂ.120 ಕೋಟಿ ವೆಚ್ಚವಾಗಲಿದ್ದು, ಈ ಯೋಜನೆಗೆ ಒಟ್ಟು ರೂ.9 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಇನ್ನು ಸಿಗ್ನಲ್ ಮುಕ್ತ ಎಲಿವೇಟೆಡ್ ಕಾರಿಡಾರ್ ಮೂಲಕ ವಾಹನ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಿದ್ದೇವೆ. ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಬಳಿ ಕಾಜಕಾಲುವೆ ಮೇಲೆ ರಸ್ತೆ ಮಾಡಿರುವ ರೀತಿ ರಸ್ತೆ ಮಾಡಲು ಎನ್‍ಜಿಟಿಯಿಂದ ಅನುಮತಿ ಸಿಗುತ್ತಿಲ್ಲ ಹೀಗಾಗಿ ರಾಜಕಾಲುವೆ ಅಕ್ಕಪಕ್ಕದ ಬಫರ್ ಪ್ರದೇಶದಲ್ಲಿ 50 ಅಡಿಯ 300 ಕಿ.ಮೀ ಉದ್ದದ ಹೊಸ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದಕ್ಕಾಗಿ 3 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಐಟಿಪಿಎಲ್, ಥಣಿಸಂಧ್ರ, ಆರ್‍ಆರ್ ನಗರ ಸೇರಿದಂತೆ ಇತರೆ ಭಾಗಗಳಲ್ಲಿ ಟಿಡಿಆರ್ ನೀಡಿ ರಸ್ತೆ ನಿರ್ಮಾಣ ಮಾಡಲಾಗುವುದು. ಹೆಬ್ಬಾಳದಿಂದ ಹೆಣ್ಣೂರು ಮಾರ್ಗದಲ್ಲಿ 7.8 ಕಿ.ಮೀ ರಸ್ತೆ ನಿರ್ಮಾಣಕ್ಕೆ ನೋಟಿಫಿಕೇಶನ್ ಕೂಡ ಹೊರಡಿಸಲಾಗಿದೆ. ಆ ಮೂಲಕ ಬೆಂಗಳೂರಿನಲ್ಲಿ 320 ಕಿ.ಮೀ ಹೊಸ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ವಿವರಣೆ ನೀಡಿದರು.1682 ಕಿ.ಮೀ ಉದ್ದದಷ್ಟು ರಸ್ತೆಗಳನ್ನು ವೈಟ್ ಟ್ಯಾಪಿಂಗ್ ಮಾಡಲಾಗುತ್ತಿದ್ದು, 30 ವರ್ಷಗಳ ಕಾಲ ಬಾಳಿಕೆ ಬರುವ ನಿರ್ವಹಣೆ ಮುಕ್ತ ರಸ್ತೆಗಳನ್ನು ಮಾಡಲಾಗಿದೆ. ಈ ಯೋಜನೆಗಳಿಗೆ 9 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಇನ್ನು 850 ಕಿ.ಮೀ ಉದ್ದದ ಮಳೆನೀರು ಗಾಲುವೆಗಾಗಿ ವಿಶ್ವಬ್ಯಾಂಕ್ ನಿಂದ 2 ಸಾವಿರ ಕೋಟಿ ಹಣ ಪಡೆಯಲಾಗಿದೆ. ಈ ಪೈಕಿ 480 ಕಿ.ಮೀ ಪೂರ್ಣಗೊಂಡಿದ್ದು, 175 ಕಿ.ಮೀ ಉದ್ದದ ಕಾಮಗಾರಿ ನಡೆಯುತ್ತಿದೆ. ಉಳಿದ 173 ಕಿ.ಮೀ ಉದ್ದದ ಕಾಮಗಾರಿ ಮುಂದೆ ಕೈಗೆತ್ತಿಕೊಳ್ಳುತ್ತೇವೆ. ಆ ಮೂಲಕ ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಯೋಜನೆ ಮುಕ್ತಾಯವಾಗಲಿದೆ” ಎಂದು ತಿಳಿಸಿದರು.*ವಿಧಾನ ಪರಿಷತ್ತಿನಲ್ಲಿ “ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ 2025 ಅಂಗೀಕಾರ*ಬೆಂಗಳೂರು, ಮಾರ್ಚ್ 13, (ಕರ್ನಾಟಕ ವಾರ್ತೆ):ವಿಧಾನ ಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ”ವನ್ನು ಮಾನ್ಯ ಮುಖ್ಯಮಂತ್ರಿಗಳ ಪರವಾಗಿ ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್. ಕೆ. ಪಾಟೀಲ್ ಅವರು ಮಂಡಿಸುತ್ತಾ, ಸಾಲಗಾರರ ಬಾಧೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ, ಊರು ಬಿಟ್ಟು ಹೋಗುವವರನ್ನು ತಡೆಯಲು ಹಾಗೂ ದೌರ್ಜನ್ಯಕ್ಕೆ ಒಳಗಾಗುವವರನ್ನು ರಕ್ಷಿಸುವ ದೃಷ್ಠಿಯಿಂದ ಈ ವಿಧೇಯಕವನ್ನು ತರುವುದರ ಮೂಲಕ ಸಕಾರ್ಕಾರವು ಅತ್ಯಂತ ಅಗತ್ಯವಾದ, ಅನಿವಾರ್ಯವಾದ ಹೆಜ್ಜೆ ಇಡಲು ಪ್ರಯತ್ನಿಸಿದೆ.ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ, ಸಾಲಗಾರರಿಂದ ಸಾಕಷ್ಟು ಕಿರುಕುಳಕ್ಕೊಳಗಾಗುವವರನ್ನು ರಕ್ಷಿಸುವ ಉದ್ದೇಶದೊಂದಿಗೆ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಲು, ಸಾರ್ವಜನಿಕರ ಹಿತ ಕಾಪಾಡಲು ಸುಗ್ರೀವಾಜ್ಞೆಯನ್ನು ತರಲಾಗಿತ್ತು. ಈ ಸುಗ್ರೀವಾಜ್ಞೆಯನ್ನು ಈಗ ವಿಧೇಯಕದ ಮೂಲಕ ತರಲಾಗಿದೆ. ಇದರಿಂದ ಪೊಲೀಸ್ ಇಲಾಖೆಯು ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವುದು ಹಾಗೂ ಈ ವಿಧೇಯಕದಲ್ಲಿ ಶಿಕ್ಷೆಯ ಪ್ರಮಾಣವನ್ನು 3 ವರ್ಷಗಳಿಂದ 10 ವರ್ಷಗಳಿಗೆ ಏರಿಸಲಾಗಿದೆ. ದಂಡವನ್ನು 5 ಸಾವಿರದಿಂದ 5 ಲಕ್ಷಗಳಿಗೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ಅಮಾಯಕರ ಮೇಲೆ ಬಲವಂತವಾಗಿ ಆಗುವ ದಬ್ಬಾಳಿಕೆ ತಡೆಯಬಹುದು. ಆರ್.ಬಿ.ಐ. ಮೂಲಕ ನಿಯಂತ್ರಣಕ್ಕೊಳಪಡುವ ಕಾನೂನು ಬದ್ದ ನೋಂದಾಯಿತ ಮತ್ತು ನಿಯಂತ್ರಿತ ನಿಕಾಯಗಳಾದ ಬ್ಯಾಂಕುಗಳು (ಸಣ್ಣ ಹಣಕಾಸು ಬ್ಯಾಂಕುಗಳು, ಸ್ಥಳೀಯ ಪ್ರದೇಶದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ವ್ಯವಹಾರ ಸಂಬಂಧಿತ ಬ್ಯಾಂಕುಗಳನ್ನು ಒಳಗೊಂಡು) ಕರ್ನಾಟಕ ಸಹಕಾರ ಸಂಘಗಳ ಅಧಿನಿಯ 1959 (1959ರ ಕರ್ನಾಟಕ ಅಧಿನಿಯಮ 11)ರಡಿ ನೋಂದಾಯಿತ ಎಲ್ಲಾ ಸಹಕಾರಿ ಬ್ಯಾಂಕುಗಳು ಮತ್ತು ಎಲ್ಲಾ ಸಹಕಾರ ಸಂಘಗಳು ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997 (2000ರ ಕರ್ನಾಟಕ ಅಧಿನಿಯಮ 17)ರಡಿ ನೋಂದಾಯಿತ ಎಲ್ಲಾ ಸೌಹಾರ್ದ ಸೊಸೈಟಿಗಳು ಮತ್ತು ಆರ್.ಬಿ.ಐ ನೊಂದಿಗೆ ನೋಂದಾಯಿತ ಎಲ್ಲಾ ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ಗೃಹ ಹಣಕಾಸು ನಿಗಮಗಳಿಗೆ ಅನ್ವಯವಾಗತಕ್ಕದ್ದಲ್ಲ ಎಂದು ತಿಳಿಸಿ ವಿಧೇಯಕವನ್ನು ಪರ್ಯಾಲೋಚಿಸಲು ಸದನದಲ್ಲಿ ಕೋರಿದರು.ವಿಧಾನ ಪರಿಷತ್ತಿನ ಸದಸ್ಯರಾದ ಕೆ.ಎಸ್. ನವೀನ್, ಐವಾನ್ ಡಿಸೋಜ, ಪ್ರದೀಪ್ ಶೆಟ್ಟರ್, ಸಿ.ಟಿ. ರವಿ, ಗೋವಿಂದರಾಜು, ಶ್ರೀಮತಿ ಉಮಾಶ್ರೀ, ಡಿ.ಎಸ್. ಅರುಣ್ ಎನ್. ರವಿಕುಮಾರ್, ಕೇಶವ ಪ್ರಸಾದ್, ಎಂ. ನಾಗರಾಜು, ಶ್ರೀಮತಿ ಬಲ್ಕೀಸ್ ಭಾನು, ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾಧಿ ನಾರಾಯಣಸ್ವಾಮಿ ಅವರುಗಳು ಪರ್ಯಾಲೋಚಿಸಿದ ನಂತರ ಸದರಿ ವಿಧೇಯಕವು ಒಮ್ಮತದಿಂದ ಸದನದಲ್ಲಿ ಅಂಗೀಕಾರವಾಯಿತು.