ವೆಟ್ ಮಿಕ್ಸ್ ಮ್ಯಾಕಡಮ್ ಬಳಸಿ ರಸ್ತೆ ಗುಂಡಿಗಳ ದುರಸ್ತಿ
ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು, ನಾಗವಾರ ಫ್ಲೈಓವರ್ ಜಂಕ್ಷನ್‌ನಿಂದ ಹೆಬ್ಬಾಳದ ಕೋರ್ಟ್‌ಯಾರ್ಡ್ ಮ್ಯಾರಿಯಟ್ ಹೋಟೆಲ್‌ವರೆಗಿನ ಸರ್ವೀಸ್ ರಸ್ತೆಯನ್ನು ಪರಿಶೀಲಿಸಿದರು. ಈ ಪ್ರದೇಶದಲ್ಲಿ ಜಲಮಂಡಳಿಯಿಂದ ಸ್ಯಾನಿಟರಿ ಲೇನ್ ಕಾಮಗಾರಿ ನಡೆಯುವುದರಿಂದ ರಸ್ತೆ ಡಾಂಬರೀಕರಣಕ್ಕೆ ಸಮಯಾವಕಾಶ ಬೇಕಾಗಿದೆ. ಆದ್ದರಿಂದ, ತಾತ್ಕಾಲಿಕವಾಗಿ ವೆಟ್ ಮಿಕ್ಸ್ ಮ್ಯಾಕಡಮ್ ಬಳಸಿ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವಂತೆ ಸಂಬಂಧಿತ ಕಾರ್ಯಪಾಲಕ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು. ಇದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜೊತೆಗೆ, ಸರ್ವೀಸ್ ರಸ್ತೆಯ ತ್ಯಾಜ್ಯ ಮತ್ತು ಕಸಕಡ್ಡಿಗಳನ್ನು ತೆರವುಗೊಳಿಸಿ, ರಸ್ತೆಯ ಭಾಗವನ್ನು ಸ್ವಚ್ಛಗೊಳಿಸಲು ಆದೇಶಿಸಿದರು.
ಇಂದಿರಾ ಕ್ಯಾಂಟೀನ್‌ಗಳ ಸಂಪೂರ್ಣ ವರದಿ ಸಲ್ಲಿಕೆಗೆ ಸೂಚನೆ
ಆಯುಕ್ತರು ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ, ಕಾಮಗಾರಿಗಳ ಸ್ಥಿತಿಯನ್ನು ಪರಿಶೀಲಿಸಿದರು. ಪಾಲಿಕೆ ವ್ಯಾಪ್ತಿಯ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಕ್ಯಾಂಟೀನ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು, ಬಾಗಿಲುಗಳು ಸೇರಿದಂತೆ ಸಿವಿಲ್ ಕಾಮಗಾರಿಗಳ ದುರಸ್ಥಿಗೆ ಕ್ರಮ ಕೈಗೊಳ್ಳಲು ಇಂಜಿನಿಯರಿಂಗ್ ವಿಭಾಗಕ್ಕೆ ಸೂಚಿಸಿದರು. ಜೊತೆಗೆ, ಮಾರ್ಷಲ್‌ಗಳು ಸಕ್ರಿಯವಾಗಿ ನಿಗಾವಹಿಸುವಂತೆ ತಿಳಿಸಿದರು.
ಆಟೋ ಟಿಪ್ಪರ್, ಪೌರಕಾರ್ಮಿಕರ ಮಸ್ಟರಿಂಗ್ ಸ್ಥಳಕ್ಕೆ ಭೇಟಿ
ಅಪರ ಆಯುಕ್ತರಾದ ಲತಾ ಆರ್ ಅವರು ಹೆಚ್.ಆರ್.ಬಿ.ಆರ್ ಲೇಔಟ್‌ನ ಆಟೋ ಟಿಪ್ಪರ್ ಮತ್ತು ಪೌರಕಾರ್ಮಿಕರ ಮಸ್ಟರಿಂಗ್ ಸ್ಥಳಕ್ಕೆ ಭೇಟಿ ನೀಡಿ, ಪೌರಕಾರ್ಮಿಕರ ಅಹವಾಲುಗಳನ್ನು ಆಲಿಸಿದರು. ಅವರ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದರು.
ಬಾಣಸವಾಡಿ ಇಂದಿರಾ ಕ್ಯಾಂಟೀನ್ ಪರಿಶೀಲನೆ
ಬಾಣಸವಾಡಿಯ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಲತಾ ಆರ್ ಅವರು, ಸಿಬ್ಬಂದಿ ಮತ್ತು ಸಾರ್ವಜನಿಕರೊಂದಿಗೆ ಮಾತನಾಡಿ, ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯ ನಿರ್ವಹಣೆಗೆ ಸಂಬಂಧಿಸಿದಂತೆ ಸೂಕ್ತ ಸೂಚನೆಗಳನ್ನು ನೀಡಿದರು.
ಹೆಚ್.ಆರ್.ಬಿ.ಆರ್ ಲೇಔಟ್‌ನ ರಸ್ತೆ ಗುಂಡಿಗಳ ದುರಸ್ಥಿ
ಹೆಚ್.ಆರ್.ಬಿ.ಆರ್ ಲೇಔಟ್‌ನ ಮುಖ್ಯ ರಸ್ತೆಯ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಇದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ಯಾವುದೇ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.
ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ಬಾಣಸವಾಡಿ ಉಪವಿಭಾಗದಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ, ಬೃಹತ್ ನೀರುಗಾಲುವೆ ಸುಧಾರಣೆ, ಮತ್ತು ಫುಟ್‌ಪಾತ್ ಡಕ್ಟ್ ಕಾಮಗಾರಿಗಳನ್ನು ಆಯುಕ್ತರು ಪರಿಶೀಲಿಸಿದರು. ಈ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಕಾರ್ಯಪಾಲಕ ಇಂಜಿನಿಯರ್‌ಗಳು, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.