ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಇಂದು ಬೆಳಿಗ್ಗೆ 7 ಗಂಟೆಗೆ ಅಮೃತಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬ್ಯಾಟರಾಯನಪುರ ನಿಯಂತ್ರಣ ಕೊಠಡಿಯಲ್ಲಿ ನಾಗರಿಕರ ಅಹವಾಲುಗಳನ್ನು ನೇರವಾಗಿ ಆಲಿಸುವ ಫೋನ್-ಇನ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು 43 ಕರೆಗಳು ಬಂದು, 54 ಅಹವಾಲುಗಳು ದಾಖಲಾಗಿವೆ.
ತ್ಯಾಜ್ಯ ವಿಲೇವಾರಿಗೆ ತಕ್ಷಣ ಸೂಚನೆ
ಅಸಮರ್ಪಕ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಕುರಿತು 17 ಅಹವಾಲುಗಳು ಬಂದಿದ್ದು, ಆಯುಕ್ತರು ಸಂಬಂಧಿತ ಅಧಿಕಾರಿಗಳಿಗೆ ತ್ವರಿತ ಕ್ರಮಕ್ಕೆ ನಿರ್ದೇಶನ ನೀಡಿದರು. ಪ್ರತಿ ವಾರ್ಡ್ನಲ್ಲಿ ಸಕಾಲಿಕ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಆದ್ಯತೆ
ಬೀದಿ ನಾಯಿಗಳ ಹಾವಳಿ ಕುರಿತು ಹಲವು ಅಹವಾಲುಗಳು ಕೇಳಿಬಂದಿವೆ. ಆಕ್ರಮಣಕಾರಿ ನಾಯಿಗಳನ್ನು ಗುರುತಿಸಿ, ಸೂಕ್ತ ಚಿಕಿತ್ಸೆ ನೀಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪಶುಪಾಲನ ಅಧಿಕಾರಿಗಳಿಗೆ ಆಯುಕ್ತರು ನಿರ್ದೇಶನ ನೀಡಿದ್ದಾರೆ.
ರಸ್ತೆ ಗುಂಡಿಗಳು ಮತ್ತು ದುರಸ್ಥಿಗೆ ತ್ವರಿತ ಕ್ರಮ
ರಸ್ತೆ ಗುಂಡಿಗಳು ಮತ್ತು ದುರಸ್ಥಿ ಕುರಿತು ಬಂದ ಅಹವಾಲುಗಳನ್ನು ಪರಿಗಣಿಸಿ, ರಾತ್ರಿ-ಹಗಲು ನಡೆಯುತ್ತಿರುವ ಗುಂಡಿ ಮುಚ್ಚುವ ಕಾರ್ಯವನ್ನು ಇನ್ನಷ್ಟು ವೇಗಗೊಳಿಸಿ, ಗುಣಮಟ್ಟ ಕಾಪಾಡಿಕೊಂಡು ರಸ್ತೆ ನಿರ್ವಹಣೆಗೆ ಒತ್ತು ನೀಡುವಂತೆ ಅಭಿಯಂತರರಿಗೆ ಸೂಚನೆ ನೀಡಲಾಗಿದೆ.
ಸ್ವೀಕೃತ ಅಹವಾಲುಗಳ ಸಾರಾಂಶ
- ರಸ್ತೆ ನಿರ್ವಹಣೆ ಮತ್ತು ದುರಸ್ಥಿ: 9 ದೂರುಗಳು
- ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್: 18 ದೂರುಗಳು
- ಜಾಹೀರಾತು ಮತ್ತು ಬೀದಿ ದೀಪ ನಿರ್ವಹಣೆ: 4 ದೂರುಗಳು
- ಅಪಾಯಕಾರಿ ಮರ/ಕೊಂಬೆ: 1 ದೂರು
- ಆರೋಗ್ಯ ಮತ್ತು ನೈರ್ಮಲ್ಯ: 1 ದೂರು
- ಒ.ಎಫ್.ಸಿ ಮತ್ತು ಇತರೆ: 2 ದೂರುಗಳು
- ಉದ್ಯಾನವನ ನಿರ್ವಹಣೆ: 2 ದೂರುಗಳು
- ಟ್ರಾಫಿಕ್ ಸಮಸ್ಯೆ: 2 ದೂರುಗಳು
- ಪಶುಪಾಲನಾ ವಿಭಾಗ: 8 ದೂರುಗಳು
- ರಾಜಕಾಲುವೆ: 2 ದೂರುಗಳು
- ವ್ಯತಿರಿಕ್ತ ಕಟ್ಟಡ ನಿರ್ಮಾಣ: 5 ದೂರುಗಳು
ಪ್ರತಿ ಅಹವಾಲನ್ನು ಪರಿಶೀಲಿಸಿ, ಸಂಬಂಧಿತ ಅಧಿಕಾರಿಗಳಿಗೆ ಕ್ರಮಕ್ಕೆ ರವಾನಿಸಲಾಗಿದೆ.
ನಾಗರಿಕರಿಂದ ಅಭಿನಂದನೆ
ಶ್ರೀ ಹರ್ಷ (ಎ.ಎಂ.ಎಸ್ ಲೇಔಟ್), ಶ್ರೀ ಸುದರ್ಶನ್ (ಯಲಹಂಕ) ಸೇರಿದಂತೆ ಮತ್ತಿಬ್ಬರು ರಸ್ತೆ ಗುಂಡಿ ನಿರ್ವಹಣೆ ಮತ್ತು ಇತರ ಕಾರ್ಯಗಳಿಗಾಗಿ ಆಯುಕ್ತರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ 6 ವಾರಗಳ ಸಾಧನೆ
ಫೋನ್-ಇನ್ ಕಾರ್ಯಕ್ರಮ ಪ್ರಾರಂಭವಾದ ಕಳೆದ 6 ವಾರಗಳಲ್ಲಿ 331 ಅಹವಾಲುಗಳು ದಾಖಲಾಗಿದ್ದು, ಅವುಗಳಲ್ಲಿ 176 ಕ್ಕೆ ಕ್ರಮ ಕೈಗೊಳ್ಳಲಾಗಿದೆ. ಉಳಿದವು ಪ್ರಗತಿಯಲ್ಲಿವೆ.
ಪ್ರತಿ ಶುಕ್ರವಾರ ಮುಂದುವರಿಕೆ
ನಾಗರಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ತ್ವರಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರತಿ ಶುಕ್ರವಾರ ಆಯುಕ್ತರ ಫೋನ್-ಇನ್ ಕಾರ್ಯಕ್ರಮ ಮುಂದುವರಿಯಲಿದೆ.












