ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವದ ಸುಗಮ ನಿರ್ವಹಣೆಗಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ಶ್ರೀ ರಾಜೇಂದ್ರ ಚೋಳನ್ ಅವರು ಇಂದು ಬೆಳಿಗ್ಗೆ ಧರ್ಮರಾಯಸ್ವಾಮಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಕರಗ ಹಾದುಹೋಗುವ ಮಾರ್ಗದಲ್ಲಿ ರಸ್ತೆ ದುರಸ್ತಿ, ಒಳಚರಂಡಿಗಳ ಮ್ಯಾನ್ಹೋಲ್ಗಳ ದುರಸ್ತಿ, ಶುಚಿತ್ವ ಕಾಪಾಡುವುದು, ತ್ಯಾಜ್ಯ ಸಾಗಾಟ, ಬ್ಲ್ಯಾಕ್ ಸ್ಪಾಟ್ಗಳ ತೆರವುಗೊಳಿಸುವಿಕೆ, ರಸ್ತೆ ಅಕ್ಕಪಕ್ಕ ನಿಲ್ಲಿಸಲಾಗಿರುವ ವಾರಸುದಾರರಿಲ್ಲದ ವಾಹನಗಳ ತೆರವುಗೊಳಿಸುವಿಕೆ, ಕಟ್ಟಡ ತ್ಯಾಜ್ಯ ತೆರವು, ಬೆಸ್ಕಾಂನ ಅನುಪಯುಕ್ತ ಕಂಬಗಳ ತೆರವುಗೊಳಿಸುವಿಕೆ, ಉತ್ಸವ ಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ದೀಪಾಲಂಕಾರ, ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಎಲ್ಲಾ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಕುರಿತು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಕಳೆದ ವಾರ ನಡೆಸಿದ ಸಭೆಯಲ್ಲಿ ನೀಡಿದ ನಿರ್ದೇಶನಗಳಂತೆ ಕಾರ್ಯನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಈ ಮಹೋತ್ಸವ ಏಪ್ರಿಲ್ 1ರಂದು ಮಧ್ಯರಾತ್ರಿ ಶಕ್ತ್ಯೋತ್ಸವದೊಂದಿಗೆ ಅದ್ಧೂರಿಯಾಗಿ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದಂತೆ ನಗರ ಪಾಲಿಕೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಅಭಿವೃದ್ಧಿ ಅಪರ ಆಯುಕ್ತ ದಲ್ಜಿತ್ ಕುಮಾರ್, ಜಂಟಿ ಆಯುಕ್ತ ಹೇಮಂತ್ ಶರಣ್, ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರು, ಚಿಕ್ಕಪೇಟೆ ಹಾಗೂ ಗಾಂಧಿನಗರ ಕಾರ್ಯಪಾಲಕ ಅಭಿಯಂತರರು, ಧರ್ಮರಾಯಸ್ವಾಮಿ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಉಪಸ್ಥಿತರಿದ್ದರು.
ಬೆಂಗಳೂರು ಕರಗ ಮಹೋತ್ಸವವು ನಗರದ ಪ್ರಮುಖ ಸಾಂಸ್ಕೃತಿಕ ಪರಂಪರೆಯಾಗಿದ್ದು, ಈ ಬಾರಿ ಮಾರ್ಚ್ 24ರಂದು ಧ್ವಜಾರೋಹಣದೊಂದಿಗೆ ಆರಂಭವಾಗಿ ಏಪ್ರಿಲ್ 1ರಂದು ಶಕ್ತ್ಯೋತ್ಸವದೊಂದಿಗೆ ಕೊನೆಗೊಳ್ಳಲಿದೆ.












