ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ (BBMP) ಆಯುಕ್ತ ಶ್ರೀ ರಾಜೇಂದ್ರ ಚೋಳನ್ ಅವರು ಇಂದು ಬೆಳಿಗ್ಗೆ 5 ಗಂಟೆಯಿಂದ ಪಾಲಿಕೆ ವ್ಯಾಪ್ತಿಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಬೃಹತ್ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವಚ್ಛತಾ ಕಾರ್ಯ ಅತ್ಯಂತ ಅಚ್ಚುಕಟ್ಟಾಗಿ ನಡೆಯಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿಕ್ಕಪೇಟೆ ವಿಭಾಗದ ಆರ್.ವಿ. ರಸ್ತೆ ಹಾಗೂ ಲಾಲ್‌ಬಾಗ್ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಸಿಬ್ಬಂದಿಗಳೊಂದಿಗೆ ಆಯುಕ್ತರು ಸಂವಾದ ನಡೆಸಿದರು. ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಶ್ಲಾಘನೀಯ ಎಂದು ಹೊಗಳಿದ ಅವರು, ಅವರ ಕುಂದುಕೊರತೆಗಳನ್ನೂ ಆಲಿಸಿದರು.
ಪೌರಕಾರ್ಮಿಕರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳಾದ ಉಪಕರಣಗಳು, ಮಳೆಗಾಲದಲ್ಲಿ ಆಶ್ರಯ ತಾಣಗಳು ಹಾಗೂ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಬೃಹತ್ ಸ್ವಚ್ಛತಾ ಅಭಿಯಾನದಿಂದ ನಗರದ ಪ್ರಮುಖ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳು ಸಂಪೂರ್ಣ ಸ್ವಚ್ಛಗೊಳ್ಳುತ್ತಿವೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.











