ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಕನಸಿನ ನಗರವಾದ ಬೆಂಗಳೂರಿನ ಪ್ರತಿಷ್ಠೆಗೆ ಘೋರ ಪೆಟ್ಟು ಬಿದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಈಗ “ಗುಂಡಿಯೂರು” ಎಂಬ ಕುಖ್ಯಾತಿಗೆ ಒಳಗಾಗುತ್ತಿದ್ದು, ಇದಕ್ಕೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯೇ ನೇರವಾಗಿ ಹೊಣೆಗಾರರೆಂದು ಅವರು ಆರೋಪಿಸಿದ್ದಾರೆ.
ಕುಮಾರಸ್ವಾಮಿ ತಮ್ಮ X ಖಾತೆಯಲ್ಲಿ ಬರೆದಿರುವ ಪತ್ರಿಕಾ ಹೇಳಿಕೆಯಲ್ಲಿ, ಬೆಂಗಳೂರಿನ ಆಡಳಿತದ ಘೋರ ವೈಫಲ್ಯವನ್ನು ಎತ್ತಿ ತೋರಿಸಿದ್ದಾರೆ. “ಹೆಜ್ಜೆ ಹೆಜ್ಜೆಗೂ ಸಾವಿನ ಗುಂಡಿ, ಕಂಡೆಲ್ಲೆಲ್ಲ ಕಸದ ರಾಶಿ. ಗ್ರೇಟರ್ ಬೆಂಗಳೂರು ಎಂದರೆ ಇದೇನಾ? ಜನರ ತೆರಿಗೆ ದುಡ್ಡು ನುಂಗಿ ಗೊರಕೆ ಹೊಡೆಯುತ್ತಿರುವ ಜಿಬಿಎ ಏನು ಮಾಡುತ್ತಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ, ಉದ್ಯಮಿಗಳ ದೂರಿನ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. “ಉದ್ಯಮಿಗಳು ಸರಕಾರದ ವೈಫಲ್ಯವನ್ನು ಕಠಿಣವಾಗಿ ಟೀಕಿಸಿರುವುದು ಇತಿಹಾಸದಲ್ಲಿ ಮೊದಲ ಬಾರಿಗೆ. ಈ ಸರಕಾರಕ್ಕೆ ಎಳ್ಳಷ್ಟೂ ಸಂಕೋಚವಿಲ್ಲ, ಕನ್ನಡಿಗರ ಸ್ವಾಭಿಮಾನವನ್ನು ಗುಂಡಿಪಾಲು ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆರಿಗೆ ಸಂಗ್ರಹದಲ್ಲಿ ರಾಕೆಟ್ ವೇಗದ ಸರಕಾರ, ಗುಂಡಿಗಳನ್ನು ಮುಚ್ಚುವಲ್ಲಿ ಕೊನೆಪಕ್ಷ ಆಮೆ ವೇಗವೂ ತೋರದಿರುವುದು, ಕೊಳ್ಳೆ ಹೊಡೆಯುವ ಉನ್ಮಾದಕ್ಕೆ ಹೋಲಿಸಿದರೆ ಅಭಿವೃದ್ಧಿಯ ಕಡೆಗೆ ಸಂಪೂರ್ಣ ಉಪೇಕ್ಷೆ ತೋರಿರುವುದು ಗ್ರೇಟರ್ ಬೆಂಗಳೂರನ್ನು ಗಬ್ಬೆದ್ದು ನಾರುವಂತೆ ಮಾಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. “ಗುಂಡಿ ಮುಚ್ಚಲು ಬಿಡಿಗಾಸಿಲ್ಲದ ಸರಕಾರ ಜನರಿಂದ ಕಿತ್ತುಕೊಳ್ಳುವ ತೆರಿಗೆ ಹಣ ಎಲ್ಲಿ ಸೇರುತ್ತಿದೆ? ಯಾರ ಕಿಸೆಗೆ ಹೋಗುತ್ತಿದೆ? ಇದಕ್ಕೆ ಉತ್ತರ ಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಕಂಪನಿಗಳು ರಾಜ್ಯ ಸರಕಾರದ ಮೇಲಿನ ಭರವಸೆ ಕಳೆದುಕೊಂಡು ನೆರೆಯ ರಾಜ್ಯಗಳಿಗೆ ವಲಸೆ ಹೋಗುತ್ತಿರುವ ಬಗ್ಗೆಯೂ ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ. “ನೆರೆಯ ರಾಜ್ಯಗಳು ರಿಯಾಯಿತಿಗಳನ್ನು ನೀಡಿ ಕಾಯುತ್ತಿವೆ. ಈ ಭಂಡ ಸರಕಾರಕ್ಕೆ ಇದು ಅರ್ಥವಾಗುತ್ತಿಲ್ಲ. ಈ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ” ಎಂದು ಟೀಕಿಸಿದ್ದಾರೆ.
ಅಂತಿಮವಾಗಿ, ಉದ್ಯಮಿಗಳಿಗೆ ಮನವಿ ಮಾಡಿರುವ ಕುಮಾರಸ್ವಾಮಿ, “ಬೆಂಗಳೂರು ಬಿಡುವುದು ಬೇಡ. ಈ ನಗರಕ್ಕೆ ಮಹಾನ್ ಪರಂಪರೆ ಇದೆ. ಈ ಎಮ್ಮೆ ಚರ್ಮದ ಸರಕಾರಕ್ಕೆ ಪಾಠ ಕಲಿಸುತ್ತೇವೆ. ನಿಮ್ಮ ಜೊತೆಗೆ ಇಡೀ ಕರ್ನಾಟಕದ ಜನತೆ ಇದೆ. ನಾವೆಲ್ಲರೂ ಸೇರಿ ಬೆಂಗಳೂರನ್ನು ಮತ್ತೆ ಮಹಾನಗರವಾಗಿಸೋಣ” ಎಂದು ಕರೆ ನೀಡಿದ್ದಾರೆ.