ಬೆಂಗಳೂರು, ಮೇ 02: ಅಡಕಮಾರನಹಳ್ಳಿಯ ಓವರ್ ಟ್ಯಾಂಕ್ ಬಳಿ ಬಾಡಿಗೆ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಲೀಕೇಜ್‌ನಿಂದ ಸಂಭವಿಸಿದ ಬೆಂಕಿಯ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ನಾಗರಾಜ್ (50) ಮತ್ತು ಶ್ರೀನಿವಾಸ್ (50) ಎಂದು ಗುರುತಿಸಲಾಗಿದೆ. ಗಾಯಗೊಂಡವರಾದ ಲಕ್ಷ್ಮಿದೇವಿ (35), ಬಸವನಗೌಡ (19), ಅಭಿಷೇಕ್ ಗೌಡ (18), ಮತ್ತು ಶಿವಶಂಕರ್‌ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಭಿಷೇಕ್‌ನ ಸ್ಥಿತಿ ಗಂಭೀರವಾಗಿದೆ.
ಗಂಗಯ್ಯ ಎಂಬುವರಿಗೆ ಸೇರಿದ ಬಾಡಿಗೆ ಮನೆಯೊಂದರಲ್ಲಿ ಎರಡು ವರ್ಷಗಳಿಂದ ವಾಸಿಸುತ್ತಿದ್ದ ಬಳ್ಳಾರಿಯ ನಾಗರಾಜ್ ಕುಟುಂಬಕ್ಕೆ ಈ ದುರ್ಘಟನೆ ಸಂಭವಿಸಿದೆ. ಬೆಳಗ್ಗೆ ಕೆಲಸಕ್ಕೆ ತೆರಳುವ ಮುನ್ನ ನಾಗರಾಜ್ ದೇವರಿಗೆ ದೀಪ ಹಚ್ಚಿದ್ದರು. ಈ ವೇಳೆ, ಖಾಲಿಯಾದ ಸಿಲಿಂಡರ್ ಬದಲಾಯಿಸಲು ಮುಂದಾಗಿದ್ದ ಅವರ ಎರಡನೇ ಮಗ ಅಭಿಷೇಕ್, ಸಿಲಿಂಡರ್ ಫಿಟ್ ಮಾಡುವಾಗ ಗ್ಯಾಸ್ ಲೀಕ್ ಆಗಿದೆ. ದೀಪದ ಬೆಂಕಿ ಗ್ಯಾಸ್‌ಗೆ ತಗುಲಿ ಮನೆಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ.
ನಾಗರಾಜ್, ಲಕ್ಷ್ಮಿದೇವಿ, ಬಸವನಗೌಡ, ಮತ್ತು ಅಭಿಷೇಕ್ ಬೆಂಕಿಯಲ್ಲಿ ಸಿಲುಕಿದ್ದಾರೆ. ಲಕ್ಷ್ಮಿದೇವಿ ಮತ್ತು ಬಸವನಗೌಡ ಓಡಿ ಹೊರಬಂದರೂ, ನಾಗರಾಜ್ ಮತ್ತು ಅಭಿಷೇಕ್ ಬೆಂಕಿಯ ಕಿಡಿಗಳಿಗೆ ಸಿಲುಕಿ ನರಳಾಡಿದ್ದಾರೆ. ಈ ಸಂದರ್ಭದಲ್ಲಿ, ಪಕ್ಕದ ಮನೆಯ ಶ್ರೀನಿವಾಸ್ ಮತ್ತು ಮನೆಯ ಮಾಲೀಕ ಶಿವಶಂಕರ್ ಬೆಂಕಿ ನಂದಿಸಲು ಮತ್ತು ಸಿಲುಕಿದವರನ್ನು ರಕ್ಷಿಸಲು ಮುಂದಾದರು. ಆದರೆ, ಶ್ರೀನಿವಾಸ್ ಅಭಿಷೇಕ್‌ನನ್ನು ರಕ್ಷಿಸಲು ಯತ್ನಿಸುವಾಗಲೇ ಮತ್ತು ಶಿವಶಂಕರ್ ನಾಗರಾಜ್‌ನನ್ನು ಉಳಿಸಲು ಹೋಗುವಾಗ ಬೆಂಕಿಗೆ ಸಿಲುಕಿದರು.
ಸ್ಥಳೀಯರು ಕೂಡಲೇ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದರೂ, ಬೆಂಕಿಯ ತೀವ್ರತೆಗೆ ಸುಟ್ಟುಹೋಗಿದ್ದ ನಾಗರಾಜ್ ಮತ್ತು ಶ್ರೀನಿವಾಸ್ ಮೃತಪಟ್ಟಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಯ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.