ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ 3,802 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ (ಐಡಿ ಕಾರ್ಡ್) ವಿತರಿಸುವ ಕಾರ್ಯಕ್ರಮಕ್ಕೆ ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರು ಸಾಂಕೇತಿಕವಾಗಿ 15 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತ ಕೆ.ಎನ್. ರಮೇಶ್ ಅವರು, ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ 2014 ಹಾಗೂ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರದ ನಿಯಂತ್ರಣ ಮತ್ತು ಪರವಾನಿಗೆ) ಯೋಜನೆ 2020 ಅನ್ವಯ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯದಲ್ಲಿ ಸೆಪ್ಟೆಂಬರ್ 20, 2024 ರಿಂದ ಜನವರಿ 6, 2025 ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ಈ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಸರ್ಕಾರದ ಆಪ್ ಮೂಲಕ ನಡೆಸಿದ ಈ ಸಮೀಕ್ಷೆಯಲ್ಲಿ ಪಾಲಿಕೆಯ ಮಾರ್ಷಲ್‌ಗಳು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು (CRP), ಕಿರಿಯ ಆರೋಗ್ಯ ಪರಿವೀಕ್ಷಕರು ಮತ್ತು ಹೊಲಿಗೆ ಶಿಕ್ಷಕರು ಸ್ಥಳ ಪರಿಶೀಲನೆ ಮೂಲಕ ಮಾಹಿತಿ ಸಂಗ್ರಹಿಸಿದ್ದರು.

ಇನ್ನುಳಿದ ಗುರುತಿಸಲಾದ ಬೀದಿ ಬದಿ ವ್ಯಾಪಾರಿಗಳಿಗೆ ಅವರು ವ್ಯಾಪಾರ ಮಾಡುವ ಸ್ಥಳಕ್ಕೇ ಭೇಟಿ ನೀಡಿ ಗುರುತಿನ ಚೀಟಿಗಳನ್ನು ವಿತರಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಗುರುತಿನ ಚೀಟಿ ಪಡೆದ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ನಗರದಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗುತ್ತದೆ. ವ್ಯಾಪಾರದ ಸಮಯದಲ್ಲಿ ಚೀಟಿಯನ್ನು ಕಡ್ಡಾಯವಾಗಿ ಧರಿಸಿರಬೇಕು. ಗುರುತಿನ ಚೀಟಿ ಇಲ್ಲದೆ ವ್ಯಾಪಾರ ಮಾಡುವುದು ಅಕ್ರಮವಾಗಿದ್ದು, ಅಂತಹ ವ್ಯಾಪಾರಿಗಳ ಮಾಹಿತಿಯನ್ನು ಪಾಲಿಕೆಗೆ ತಿಳಿಸುವಂತೆ ಆಯುಕ್ತರು ಸಾರ್ವಜನಿಕರನ್ನು ಕೋರಿದರು.
ಕಾರ್ಯಕ್ರಮದಲ್ಲಿ ಅಪರ ಆಯುಕ್ತ ನವೀನ್ ಕುಮಾರ್ ರಾಜು, ಜಂಟಿ ಆಯುಕ್ತ ಮಧು ಹಾಗೂ ಬೀದಿ ಬದಿ ವ್ಯಾಪಾರಿಗಳ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಈ ಕ್ರಮದಿಂದ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಕಾನೂನುಬದ್ಧ ರಕ್ಷಣೆ ದೊರೆಯಲಿದ್ದು, ನಗರದಲ್ಲಿ ವ್ಯಾಪಾರ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ.












