70 ಟನ್ ತ್ಯಾಜ್ಯ ತೆರವು, ವೈಟ್ ಟಾಪಿಂಗ್ ರಸ್ತೆಯಲ್ಲಿ ಡ್ರೈನೇಜ್ ಸುಧಾರಣೆಗೆ ಸೂಚನೆ
ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಡ್ಡರಪಾಳ್ಯ ವೃತ್ತದಿಂದ ಹೆಣ್ಣೂರು-ಬಾಗಲೂರು ರಸ್ತೆವರೆಗೆ (ಡಿ.ಎನ್.ಆರ್ ಪಾರ್ಕಿಂಗ್ ವರೆಗೆ) ಸುಮಾರು 5.3 ಕಿಲೋಮೀಟರ್ ಉದ್ದದ ರಸ್ತೆಯಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರ ನಿರ್ದೇಶನದಡಿ ನಡೆದ ಈ ಕಾರ್ಯಕ್ರಮದಲ್ಲಿ ರಸ್ತೆಯ ಉಭಯ ಬದಿಗಳು ಮತ್ತು ಮೀಡಿಯನ್‌ನಲ್ಲಿ ಸಂಗ್ರಹವಾಗಿದ್ದ 60 ಟನ್ ಸಿಲ್ಟ್, 10 ಟನ್ ಕಸ, ಕಟ್ಟಡ ಭಗ್ನಾವಶೇಷಗಳು, ಹಳೆಯ ಸೋಫಾ, ಹಾಸಿಗೆ ಮತ್ತಿತರ ಗೃಹೋಪಯೋಗಿ ವಸ್ತುಗಳನ್ನು ತೆರವುಗೊಳಿಸಲಾಯಿತು. ಅಪರ ಆಯುಕ್ತ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಈ ಕುರಿತು ಮಾಹಿತಿ ನೀಡಿದರು.
ಅಭಿಯಾನದಲ್ಲಿ ಬ್ಲಾಕ್ ಸ್ಪಾಟ್ ಸ್ವಚ್ಛತೆ, ಹ್ಯಾಂಗಿಂಗ್ ಕೇಬಲ್ ತೆರವು, ರಸ್ತೆ ಗುಂಡಿಗಳನ್ನು ಮುಚ್ಚುವುದು, ಫ್ಲೆಕ್ಸ್ ತೆರವು ಮತ್ತು ಶೋಲ್ಡರ್ ಡ್ರೈನ್ ಸ್ವಚ್ಛತೆಯನ್ನೂ ಕೈಗೊಳ್ಳಲಾಯಿತು. ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆದ ಈ ಕಾರ್ಯದಲ್ಲಿ ಮಹದೇವಪುರ ಮತ್ತು ಕೆ.ಆರ್.ಪುರಂ ವಲಯಗಳ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಪ್ರಧಾನ ವ್ಯವಸ್ಥಾಪಕರು (ಬಿಎಸ್‌ಡಬ್ಲ್ಯೂಎಂಎಲ್), ಆರೋಗ್ಯ ಮೇಲ್ವಿಚಾರಕರು, ಮಾರ್ಷಲ್ ಸೂಪರ್‌ವೈಸರ್‌ಗಳು, ಕಿರಿಯ ಆರೋಗ್ಯ ಪರಿವೀಕ್ಷಕರು, ವಾರ್ಡ್ ಮಾರ್ಷಲ್‌ಗಳು ಮತ್ತು ಪೌರಕಾರ್ಮಿಕರು ಸಕ್ರಿಯವಾಗಿ ಭಾಗವಹಿಸಿದರು. ಒಟ್ಟು 180ಕ್ಕೂ ಹೆಚ್ಚು ಪೌರ ಕಾರ್ಮಿಕರು, 20 ಟ್ರ್ಯಾಕ್ಟರ್‌ಗಳು, 6 ಆಟೋ ಟಿಪ್ಪರ್‌ಗಳು ಮತ್ತು 2 ಲ್ಯಾಡ್ಡರ್ ಜೀಪ್‌ಗಳನ್ನು ಬಳಸಿಕೊಳ್ಳಲಾಯಿತು.
ಇದೇ ವೇಳೆ, ಹೆಣ್ಣೂರು-ಬಾಗಲೂರು ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯನ್ನು ಪರಿಶೀಲಿಸಿದ ಅಪರ ಆಯುಕ್ತರು, ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಗಮನಿಸಿದರು. ವೈಟ್ ಟಾಪಿಂಗ್ ಕಾಮಗಾರಿ ಸಂದರ್ಭದಲ್ಲಿ ಸರಿಯಾದ ರಸ್ತೆ ಇಳಿಜಾರು ಕಲ್ಪಿಸಿ, ನೀರು ನಿಲ್ಲದಂತೆ ಡ್ರೈನೇಜ್ ವ್ಯವಸ್ಥೆಯನ್ನು ಸುಧಾರಿಸುವಂತೆ ಬಿ-ಸ್ಮೈಲ್ ಅಧಿಕಾರಿಗಳಿಗೆ ಸೂಚಿಸಿದರು.
“ಸ್ವಚ್ಛತಾ ಅಭಿಯಾನವು ನಗರದ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಮಹತ್ವದ ಹೆಜ್ಜೆಯಾಗಿದೆ. ನಾಗರಿಕರ ಸಹಕಾರದೊಂದಿಗೆ ನಗರವನ್ನು ಸ್ವಚ್ಛ ಮತ್ತು ಸುಂದರಗೊಳಿಸಲು ಪೂರ್ವ ನಗರ ಪಾಲಿಕೆ ಬದ್ಧವಾಗಿದ್ದು, ಇಂತಹ ಅಭಿಯಾನಗಳನ್ನು ನಿರಂತರವಾಗಿ ನಡೆಸಲಾಗುವುದು” ಎಂದು ಅಪರ ಆಯುಕ್ತರು ತಿಳಿಸಿದರು.











