ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ನಿರ್ದೇಶನದಂತೆ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಸಮಯಬದ್ಧವಾಗಿ ಪರಿಹರಿಸುವ ನಿಟ್ಟಿನಲ್ಲಿ ಹೊಸ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು.
ಸಮಿತಿಯಲ್ಲಿ ವಲಯ ಜಂಟಿ ಆಯುಕ್ತರು ಮುಖ್ಯಸ್ಥರಾಗಿದ್ದು, ಉಪ ಆಯುಕ್ತರು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ತೋಟಗಾರಿಕೆ, ಪಶುಪಾಲನೆ, ಅರಣ್ಯ, ಆರೋಗ್ಯ, ಘನತ್ಯಾಜ್ಯ ನಿರ್ವಹಣೆ, ಎಂಜಿನಿಯರಿಂಗ್ ಮತ್ತು ಕಂದಾಯ ವಿಭಾಗಗಳ ಅಧಿಕಾರಿಗಳು ಸದಸ್ಯರಾಗಿ ಸೇರ್ಪಡೆಯಾಗಿದ್ದಾರೆ. ಪ್ರತಿ ವಾರ ನಿಗದಿತ ದಿನದಂದು ಸಭೆ ನಡೆಸಿ ಸಾರ್ವಜನಿಕರ ದೂರುಗಳನ್ನು ಚರ್ಚಿಸಿ ತ್ವರಿತ ಕ್ರಮ ಕೈಗೊಳ್ಳಲು ಆಯುಕ್ತರು ಸೂಚಿಸಿದ್ದಾರೆ.
“ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ, ಪಾರದರ್ಶಕ ಮತ್ತು ಪರಿಣಾಮಕಾರಿ ಪರಿಹಾರ ಒದಗಿಸುವುದು ಈ ಸಮಿತಿಯ ಮುಖ್ಯ ಉದ್ದೇಶ. ವಸತಿ ಸಂಘಗಳು ಮತ್ತು ನಿವಾಸಿಗಳ ದೂರುಗಳನ್ನು ಸಮಗ್ರವಾಗಿ ಪರಿಶೀಲಿಸಿ ನಿಯಮಾನುಸಾರ ಸಮಯಬದ್ಧ ಪರಿಹಾರ ನೀಡಬೇಕು” ಎಂದು ಡಿ.ಎಸ್. ರಮೇಶ್ ತಿಳಿಸಿದರು.
ಈಗಾಗಲೇ ಪ್ರತಿ ವಲಯದಲ್ಲಿ 10 ರಿಂದ 20 ಪ್ರಮುಖ ಜಂಕ್ಷನ್‌ಗಳನ್ನು ಗುರುತಿಸಿ ಸುಧಾರಣೆ ಕಾರ್ಯ ಆರಂಭಿಸಲು ನಿರ್ದೇಶನ ನೀಡಲಾಗಿದೆ. ಪಾದಚಾರಿ ಮಾರ್ಗಗಳ ಒತ್ತುವರಿ ತೆರವು, ಚರಂಡಿ ನಿರ್ವಹಣೆ, ಮಾರ್ಕಿಂಗ್, ಅನಧಿಕೃತ ಜಾಹೀರಾತು ತೆರವು, ಅಪಾಯಕಾರಿ ಕೊಂಬೆಗಳ ತೆರವು ಮತ್ತು ಬಣ್ಣ ಬಳಿಯುವ ಕಾರ್ಯಗಳನ್ನು ಆದ್ಯತೆ ಮೇಲೆ ಕೈಗೊಳ್ಳಲಾಗುವುದು.
ಅನಧಿಕೃತ ಕಟ್ಟಡಗಳು, ಪ್ಲೆಕ್ಸ್ ಮತ್ತು ಬ್ಯಾನರ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದಲ್ಲದೆ, 2022-23, 2023-24 ಮತ್ತು 2024-25ನೇ ಸಾಲಿನ ಕಲ್ಯಾಣ ಕಾರ್ಯಕ್ರಮಗಳ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವಂತೆ ಅಪರ ಆಯುಕ್ತರು (ಅಭಿವೃದ್ಧಿ) ಸೂಚಿಸಿದ್ದಾರೆ.
ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಜಂಟಿ ಆಯುಕ್ತರು ಡಾ. ದಾಕ್ಷಾಯಿಣಿ.ಕೆ., ಸುಧಾ, ಉಪ ಆಯುಕ್ತರು ಶಶಿಕುಮಾರ್, ಮುರಳೀಧರ್, ಮುಖ್ಯ ಅಭಿಯಂತರ ಲೋಕೇಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಕ್ರಮಗಳಿಂದ ಪೂರ್ವ ಬೆಂಗಳೂರಿನ ನಾಗರಿಕರು ಉತ್ತಮ ಸೇವೆ ಪಡೆಯಲಿದ್ದಾರೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.











