ಬೆಂಗಳೂರು : ರಾಷ್ಟ್ರಧ್ವಜವು ದೇಶದ ಭಾವೈಕ್ಯ ಮತ್ತು ಗೌರವದ ಸಂಕೇತವಾಗಿದೆ. ಆದರೆ, ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ಲಾಸ್ಟಿಕ್‌ನಿಂದ ತಯಾರಾದ ರಾಷ್ಟ್ರಧ್ವಜಗಳ ಮಾರಾಟ ಮತ್ತು ಅವುಗಳ ಅನಾದರದಿಂದ ರಾಷ್ಟ್ರಧ್ವಜಕ್ಕೆ ಅವಮಾನವಾಗುತ್ತಿರುವುದು ಕಂಡುಬರುತ್ತದೆ. ಈ ಸಮಸ್ಯೆಯನ್ನು ತಡೆಗಟ್ಟುವ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯು ಬೆಂಗಳೂರಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಪ್ರತಿ ಮನೆ, ಶಾಲೆ, ಮತ್ತು ಸಂಸ್ಥೆಗಳಲ್ಲಿ ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೆ, ಕಾಗದ ಅಥವಾ ಪ್ಲಾಸ್ಟಿಕ್‌ನಿಂದ ತಯಾರಾದ ಸಣ್ಣ ರಾಷ್ಟ್ರಧ್ವಜಗಳು ಸ್ವಾತಂತ್ರ್ಯ ದಿನದಂದು ರಸ್ತೆಗಳಲ್ಲಿ, ಕಸದ ರಾಶಿಯಲ್ಲಿ, ಮತ್ತು ಚರಂಡಿಗಳಲ್ಲಿ ಬಿದ್ದಿರುವ ದೃಶ್ಯ ಸಾಮಾನ್ಯವಾಗಿದೆ. ಪ್ಲಾಸ್ಟಿಕ್ ಧ್ವಜಗಳು ಬೇಗನೇ ನಾಶವಾಗದ ಕಾರಣ, ಇವುಗಳಿಂದ ರಾಷ್ಟ್ರಧ್ವಜಕ್ಕೆ ದೀರ್ಘಕಾಲದವರೆಗೆ ಅವಮಾನವಾಗುತ್ತದೆ.

ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ, ಹಿಂದೂ ಜನಜಾಗೃತಿ ಸಮಿತಿಯು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಸರಕಾರಿ ಅಧಿನಿಯಮಗಳನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಮಾಡುವವರು, ಧ್ವಜ ಸಂಹಿತೆಯನ್ನು ಗೌರವಿಸದ ವ್ಯಕ್ತಿಗಳು, ಸಂಸ್ಥೆಗಳು, ಮತ್ತು ಗುಂಪುಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ. ಜಿಲ್ಲಾಧಿಕಾರಿಗಳು ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅಡ್ವೋಕೇಟ್ ಕೃಷ್ಣಸ್ವಾಮಿ ಕಣವೆ, ಅಡ್ವೋಕೇಟ್ ಶಕುಂತಲಾ ಶೆಟ್ಟಿ, ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯ ಗೌಡ, ರಾಷ್ಟ್ರ ರಕ್ಷಣಾಪಡೆಯ ಶ್ರೀ ಪ್ರವೀಣ್, ಶ್ರೀ ಸೂರ್ಯ, ಶ್ರೀರಾಮಸೇನೆಯ ಪ್ರಮುಖರು, ವಕೀಲರು ಸೇರಿದಂತೆ ಹಲವಾರು ಹಿಂದುತ್ವನಿಷ್ಠರು ಉಪಸ್ಥಿತರಿದ್ದರು.