ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಸುಧಾರಣೆಯಾಗುತ್ತಿದ್ದು, ಮಹಿಳೆಯರ ಸುರಕ್ಷತೆಯಲ್ಲಿ ಬೆಂಗಳೂರು ನಗರವು ದೇಶದಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧಾನಸಭೆಯಲ್ಲಿ ತಿಳಿಸಿದರು.
ಚೆನ್ನೈಯ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ (ಟಾಪ್ ಸಿಟೀಸ್ ಫಾರ್ ವಿಮೆನ್ ಇನ್ ಇಂಡಿಯಾ – TCWI 2025 ರಿಪೋರ್ಟ್) 125 ನಗರಗಳನ್ನು ಒಳಗೊಂಡಂತೆ ಮಹಿಳೆಯರಿಗೆ ಸುರಕ್ಷಿತ ಮತ್ತು ಸಮಾವೇಶಕರ ನಗರಗಳ ಶ್ರೇಯಾಂಕದಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ. ನಗರವು 53.82 ಅಂಕಗಳನ್ನು ಪಡೆದು ಮೊದಲನೇ ಸ್ಥಾನದಲ್ಲಿದ್ದರೆ, ಚೆನ್ನೈ 49.86 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ ಎಂದು ಸಚಿವರು ಹೇಳಿದರು.
ಇದಲ್ಲದೆ, ಇಂಡಿಯಾ ಜಸ್ಟೀಸ್ ರಿಪೋರ್ಟ್ 2025 ರಲ್ಲಿ ಕರ್ನಾಟಕ ರಾಜ್ಯವು ದೊಡ್ಡ ರಾಜ್ಯಗಳಲ್ಲಿ ಮೊದಲ ಸ್ಥಾನ ಪಡೆದಿದ್ದು, ಕಾನೂನು ಸುವ್ಯವಸ್ಥೆಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅವರು ಉಲ್ಲೇಖಿಸಿದರು. ಈ ಎರಡು ಸಮೀಕ್ಷೆಗಳು ರಾಜ್ಯದ ಸುರಕ್ಷತೆಯನ್ನು ಸಾಬೀತುಪಡಿಸುತ್ತವೆ ಎಂದು ಅವರು ಹೇಳಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸುನಿಲ್ ಕುಮಾರ್ ಮತ್ತು ಅರಗ ಜ್ಞಾನೇಂದ್ರ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಸರ್ಕಾರದ ಪರವಾಗಿ ಉತ್ತರ ನೀಡಿದ ಸಚಿವರು ಈ ಮಾಹಿತಿ ನೀಡಿದರು.
ಕೊಲೆ ಪ್ರಕರಣಗಳಲ್ಲಿ ಕಡಿತ: ಮಾಜಿ ಗೃಹ ಸಚಿವರ ಕಾಲದಲ್ಲಿ ಹೆಚ್ಚು ಕೊಲೆಗಳು
ಆರ್. ಅಶೋಕ್ ಅವರು ಗೃಹ ಸಚಿವರಾಗಿದ್ದ 2011-13ರಲ್ಲಿ 4,121 ಕೊಲೆಗಳು ನಡೆದಿದ್ದರೆ, ಬಸವರಾಜ್ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ 2019-21ರಲ್ಲಿ 2,554 ಮತ್ತು ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದಾಗ 2,417 ಕೊಲೆಗಳು ನಡೆದಿದ್ದವು ಎಂದು ಉಲ್ಲೇಖಿಸಿ, ಪ್ರಸ್ತುತ ಸರ್ಕಾರದ ಅವಧಿಯಲ್ಲಿ 2023ರಲ್ಲಿ 1,322 ಮತ್ತು 2024ರಲ್ಲಿ 1,208 ಕೊಲೆ ಪ್ರಕರಣಗಳು ಮಾತ್ರ ದಾಖಲಾಗಿವೆ ಎಂದು ಸಚಿವರು ಮಾಹಿತಿ ನೀಡಿದರು.
ಡ್ರಗ್ಸ್ ನಿಯಂತ್ರಣದಲ್ಲಿ ದಾಖಲೆ ಸಾಧನೆ
ಡ್ರಗ್ಸ್ ತಡೆಗಟ್ಟುವಲ್ಲಿ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. 2023ರಲ್ಲಿ 133 ಕೋಟಿ ರೂಪಾಯಿ ಮೌಲ್ಯದ 10,630 ಕೆ.ಜಿ ಗಾಂಜಾ, 2024ರಲ್ಲಿ 264 ಕೋಟಿ ರೂಪಾಯಿ ಮೌಲ್ಯದ 6,136 ಕೆ.ಜಿ ಮತ್ತು 2025ರಲ್ಲಿ 208 ಕೋಟಿ ರೂಪಾಯಿ ಮೌಲ್ಯದ 6,279 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಗುಜರಾತ್, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಡ್ರಗ್ಸ್ ತಯಾರಿಕೆ ಹೆಚ್ಚಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಎಲ್ಲಾ ಎಸ್‌ಪಿಗಳಿಗೆ ತಮ್ಮ ಜಿಲ್ಲೆಯಲ್ಲಿ ಕೆಮಿಕಲ್ ಘಟಕಗಳನ್ನು ಪರಿಶೀಲಿಸುವಂತೆ ಮತ್ತು ಡ್ರಗ್ಸ್ ದಂಧೆ ತಡೆಗಟ್ಟುವಂತೆ ಸೂಚನೆ ನೀಡಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪೊಲೀಸರು ನಡೆಸುತ್ತಿದ್ದಾರೆ ಎಂದರು.
ಸೈಬರ್ ಅಪರಾಧ ತಡೆಗೆ ಪ್ರತ್ಯೇಕ ವಿಭಾಗ
ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಡಿಜಿಪಿ ನೇತೃತ್ವದಲ್ಲಿ ಪ್ರತ್ಯೇಕ ವಿಭಾಗ ರಚಿಸಲಾಗಿದೆ. ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲು ಸಾಧ್ಯವಿಲ್ಲದಿದ್ದರೂ, ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡದೆ ಕ್ರಮ ಕೈಗೊಳ್ಳಲಾಗುತ್ತಿದೆ. ಇತ್ತೀಚೆಗೆ ಲಂಚ ಪಡೆದ ಇನ್ಸ್‌ಪೆಕ್ಟರ್ ಮತ್ತು ಹಿರಿಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಪೊಲೀಸರ ಮಾನಸಿಕ ಸ್ಥೈರ್ಯ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಗೃಹ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.












