ಬೆಂಗಳೂರು: ನಮ್ಮ ಮೆಟ್ರೋ (ಬಿಎಂಆರ್ಸಿಎಲ್) ಪ್ರಯಾಣ ದರ ಏರಿಕೆಗೆ ತಾತ್ಕಾಲಿಕ ತಡೆ ಬಿದ್ದಿದೆ. ಸೋಮವಾರ (ಫೆಬ್ರವರಿ 9) ರಿಂದ ಜಾರಿಗೆ ಬರಬೇಕಿದ್ದ ಪ್ರಸ್ತಾವಿತ ದರ ಹೆಚ್ಚಳವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿದ್ದಾರೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ನಡೆಸಿದ ದೂರವಾಣಿ ಚರ್ಚೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬೆಂಗಳೂರು ಈಗಾಗಲೇ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ದರವನ್ನು ಹೊಂದಿದೆ ಎಂದು ತೇಜಸ್ವಿ ಸೂರ್ಯ ಅವರು ಸಚಿವರಿಗೆ ಮನವರಿಕೆ ಮಾಡಿದ್ದರು. ಮತ್ತೊಂದು ಏರಿಕೆಯು ಲಕ್ಷಾಂತರ ಪ್ರಯಾಣಿಕರಿಗೆ ಹಾಗೂ ಸಾಮಾನ್ಯ ಜನರಿಗೆ ಭಾರಿ ಹೊರೆಯಾಗುತ್ತದೆ ಎಂದು ಅವರು ಒತ್ತಾಯಿಸಿದ್ದರು.
ಸಚಿವ ಖಟ್ಟರ್ ಅವರು ತ್ವರಿತವಾಗಿ ಸ್ಪಂದಿಸಿ, ಪ್ರಸ್ತಾವಿತ ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರ ಜೊತೆಗೆ ದರ ನಿಗದಿ ಸಮಿತಿಯಲ್ಲಿನ ಲೋಪಗಳನ್ನು ವೈಯಕ್ತಿಕವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರ ವಿನಂತಿಸಿದರೆ ಹೊಸ ದರ ನಿಗದಿ ಸಮಿತಿ (Fare Fixation Committee) ರಚಿಸುವ ಬಗ್ಗೆಯೂ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ತೇಜಸ್ವಿ ಸೂರ್ಯ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೋ ಈಗಾಗಲೇ ದೇಶದಲ್ಲೇ ಅತ್ಯಧಿಕ ದರ ಹೊಂದಿರುವುದರಿಂದ ಮತ್ತೊಂದು ಏರಿಕೆಯು ಸಾರ್ವಜನಿಕ ಸಾರಿಗೆಯನ್ನು ನಂಬಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ. ಪ್ರಯಾಣಿಕರ ಹಿತದೃಷ್ಟಿಯಿಂದ ತ್ವರಿತ ಕ್ರಮ ಕೈಗೊಂಡ ಕೇಂದ್ರ ಸಚಿವರಿಗೆ ರಾಜ್ಯದ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಆದರೆ ಈಗ ರಾಜ್ಯ ಸರ್ಕಾರದ ಮುಂದೆ ಪ್ರಶ್ನೆ ಎದುರಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಹಠಮಾರಿ ಧೋರಣೆ ಬಿಟ್ಟು ಹೊಸ ದರ ನಿಗದಿ ಸಮಿತಿ ರಚನೆ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ಮೆಟ್ರೋ ಪ್ರಯಾಣವು ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಕೈಗೆಟುಕುವ ದರದಲ್ಲಿ ಲಭ್ಯವಾಗುವವರೆಗೂ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಫೆಬ್ರವರಿ 9ರಿಂದ ಶೇ.5ರಷ್ಟು ದರ ಏರಿಕೆ ಘೋಷಿಸಿತ್ತು. ಇದು ಪ್ರಯಾಣದ ದೂರಕ್ಕೆ ಅನುಗುಣವಾಗಿ ₹1 ರಿಂದ ₹5ರವರೆಗೆ ಹೆಚ್ಚಳವಾಗುವಂತಿತ್ತು. ಆದರೆ ಕೇಂದ್ರದ ಹಸ್ತಕ್ಷೇಪದಿಂದ ಈ ಏರಿಕೆ ಸದ್ಯಕ್ಕೆ ಸ್ಥಗಿತಗೊಂಡಿದೆ.












