ಪ್ರಧಾನಿ ಮೋದಿ ಕೊನಪ್ಪನ ಅಗ್ರಹಾರದವರೆಗೆ ಮೆಟ್ರೋ ಪ್ರಯಾಣ
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲಿನ 2ನೇ ಹಳದಿ ಮಾರ್ಗದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಮಾರ್ಗವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ರಾಗಿಗುಡ್ಡ ಮೆಟ್ರೋ ರೈಲು ನಿಲ್ದಾಣದಲ್ಲಿ ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಅವರು ಮೆಟ್ರೋ ರೈಲಿನಲ್ಲಿ ಕೊನಪ್ಪನ ಅಗ್ರಹಾರದವರೆಗೆ ಪ್ರಯಾಣಿಸಿದರು.

ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಹಾಗೂ ವಿದ್ಯುತ್ ಸಚಿವ ಮನೋಹರ್ ಲಾಲ್, ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ, ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಾ. ಸಿ.ಎನ್. ಮಂಜುನಾಥ್ ಸೇರಿದಂತೆ ಗಣ್ಯರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಹೊಸ ಮಾರ್ಗದ ಉದ್ಘಾಟನೆಯು ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ನಗರದ ದಕ್ಷಿಣ ಭಾಗದ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸಲಿದೆ.